ಸಾರಾಂಶ
ಕೊಯಮತ್ತೂರು: ಫೆ.26ರಂದು ಇಲ್ಲಿನ ಈಶ ಯೋಗಕೇಂದ್ರದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಉತ್ಸವದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿವಿಧ ರಾಜ್ಯಗಳ ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈಶ ಯೋಗ ಕೇಂದ್ರದ ಸಂಸ್ಥಾಪಕರಾದ ಸದ್ಗುರು ಅವರು, ಜನರಿಗೆ ಧ್ಯಾನ ಮಾಡಲು 7 ನಿಮಿಷ ಉಚಿತ ಮಾರ್ಗದರ್ಶನ ನೀಡುವ ಆ್ಯಪ್ ಅನ್ನು ಅನಾವರಣಗೊಳಿಸಲಿದ್ದಾರೆ ಎಂದು ಈಶ ಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಶಿವರಾತ್ರಿ ನಿಮಿತ್ತ ರಾತ್ರಿಯಿಡೀ ನಡೆಯುವ ಉತ್ಸವ ಬುಧವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಈಶ ಸಂಸ್ಥೆಯ ಶಿವರಾತ್ರಿ ವಿರುದ್ಧದ ಅರ್ಜಿ ಹೈಕೋರ್ಟಿಂದ ವಜಾ
ಚೆನ್ನೈ: ಕೊಯಮತ್ತೂರಿನ ಈಶ ಫೌಂಡೇಶನ್‌ನಲ್ಲಿ ಮಹಾಶಿವರಾತ್ರಿ ಆಚರಣೆಗೆ ಅನುಮತಿ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.‘ಸಂಸ್ಥೆಯು ಒಳಚರಂಡಿ ಸಂಸ್ಕರಣಾ ಸೌಲಭ್ಯಗಳನ್ನು ಹೊಂದಿರದೆ, ಕೊಳಚೆ ನೀರನ್ನು ಹೊರಬಿಡುತ್ತದೆ ಹಾಗೂ ಅತಿಯಾದ ಶಬ್ದಮಾಲಿನ್ಯ ಮಾಡುತ್ತದೆ. ಹೋದ ವರ್ಷವೂ ಕೆಲ ನಿಯಮಗಳನ್ನು ಉಲ್ಲಂಘಿಸಿತ್ತು. ಆದಕಾರಣ ಈ ಬಾರಿ ಫೆ.26 ಹಾಗೂ 27ರಂದು ಮಹಾಶಿವರಾತ್ರಿ ಆಯೋಜಿಸಲು ಅನುಮತಿಸಬಾರದು’ ಎಂದು ಎಸ್.ಟಿ. ಶಿವಗಂಗನ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಹೈಕೋರ್ಟ್ ಆದೇಶದಂತೆ ಪರಿಶೀಲನೆ ನಡೆಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ‘ಈಶ ಸಂಸ್ಥೆ ಸಂಸ್ಕರಣಾ ಸೌಲಭ್ಯಗಳನ್ನು ಹೊಂದಿದೆ. ಜೊತೆಗೆ, ಶಬ್ದ ಮಟ್ಟದ ಗುಣಮಟ್ಟವು ಮಂಡಳಿಯು ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿದೆ. ವಾಯು, ಜಲ ಹಾಗೂ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ಯಾವುದೇ ದೂರುಗಳು ಬಂದಿಲ್ಲ’ ಎಂಬ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್, ಶಿವಗಂಗನ್ ಅವರ ಅರ್ಜಿಯನ್ನು ವಜಾಗೊಳಿಸಿದೆ.