ಜು.12ಕ್ಕೆ ಅನಂತ್‌ ಅಂಬಾನಿ ಮದುವೆ ನಡೆಯುವ ನಿಮಿತ್ತ ಈಗಲೇ ವಿವಾಹಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.1 ರಿಂದ 3ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಬಾಲಿವುಡ್‌, ಹಾಲಿವುಡ್‌, ಕ್ರಿಕೆಟ್‌, ಉದ್ಯಮಿಗಳ ಗಣ್ಯರ ದಂಡು ಒಂದೆಡೆ ಸೇರುವ ನಿರೀಕ್ಷೆಯಿದೆ.

ಮುಂಬೈ: ಭಾರತದ ಪ್ರಮುಖ ಉದ್ಯಮಿ ಮುಕೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗಳ ಕಿರಿಯ ಪುತ್ರ ಅನಂತ್‌ ಅಂಬಾನಿಯ ವಿವಾಹಪೂರ್ವ ಕಾರ್ಯಕ್ರಮಗಳನ್ನು ಮಾ.1 ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಬರುವ ಜುಲೈ 12 ರಂದು ಅನಂತ್‌ ಅಂಬಾನಿ ಹಾಗೂ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವೀರೆನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್‌ ಅವರ ಕಿರಿಯ ಪುತ್ರಿ ರಾಧಿಕಾ ಮರ್ಚೆಂಟ್‌ ಅವರ ವಿವಾಹವನ್ನು ನಿಗದಿಪಡಿಸಲಾಗಿದೆ. ಈ ನಿಮಿತ್ತ ಅಂಬಾನಿಯವರ ಬೃಹತ್ ತೈಲ ಸಂಸ್ಕರಣಾಗಾರಗಳನ್ನು ಹೊಂದಿರುವ ಜಾಮ್‌ನಗರದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳನ್ನು 4 ತಿಂಗಳು ಮೊದಲೇ ಆಯೋಜಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಉದ್ಯಮಿಗಳಾದ ಗೌತಮ್‌ ಅದಾನಿ, ಸುನಿಲ್ ಭಾರತಿ ಮಿತ್ತಲ್ ಮತ್ತು ಬಾಲಿವುಡ್‌ ತಾರೆಯರಾದ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌, ಕ್ರಿಕೆಟ್‌ ದಿಗ್ಗಜರಾದ ಎಮ್ಎಸ್‌ ಧೋನಿ, ಸಚಿನ್‌ ತೆಂಡುಲ್ಕರ್ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಜಾಮ್‌ನಗರದಲ್ಲಿ ಪಂಚತಾರಾ ಹೋಟೆಲ್‌ಗಳಿಲ್ಲದ ಕಾರಣ, ಅತಿಥಿಗಳಿಗಾಗಿ ಟೈಲ್ಡ್‌ ಬಾತ್‌ರೂಮ್‌ಗಳು ಸೇರಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಅಲ್ಟ್ರಾ ಐಷಾರಾಮಿ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಅಡೋಬ್ ಸಿಇಒ ಶಂತನು ನಾರಾಯಣ್ ಸೇರಿ ಹಲವರೂ ಅತಿಥಿಗಳ ಪಟ್ಟಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.