ಸಾರಾಂಶ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೂರು ದಿನದ ಆಡಳಿತದಿಂದ ಆಕ್ರೋಶಗೊಂಡಿರುವ ಜನರ ಗಮನ ಬೇರೆಡೆ ಸೆಳೆಯಲು ತಿರುಪತಿಯಲ್ಲಿ ತುಪ್ಪದ ಕಲಬೆರಕೆ ನಡೆಯುತ್ತಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.
ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೂರು ದಿನದ ಆಡಳಿತದಿಂದ ಆಕ್ರೋಶಗೊಂಡಿರುವ ಜನರ ಗಮನಬೇರೆಡೆ ಸೆಳೆಯಲು ತಿರುಪತಿಯಲ್ಲಿ ತುಪ್ಪದ ಕಲಬೆರಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗನ್ , ‘ನಾಯ್ಡುರಂತಹ ವ್ಯಕ್ತಿ ರಾಜಕೀಯ ಲಾಭಕ್ಕಾಗಿ ದೇವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ’. ‘ಇದೊಂದು ತಿರುವಿನ ರಾಜಕೀಯ, ಜನರು ಚಂದ್ರಬಾಬು ನಾಯ್ಡು ಅವರ ನೂರು ದಿನಗಳ ಆಡಳಿತದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅವರ ಆರು ಭರವಸೆಗಳ ಈಡೇರಿಕೆಗೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಜನರ ಗಮನವನ್ನು ಬೇರೆಡೆ ತಿರುಗಿಸಲು ಈ ಕಥೆಯನ್ನು ಹೆಣೆದಿದ್ದಾರೆ’ ಎಂದು ಜಗನ್ ಕಿಡಿ ಕಾರಿದ್ದಾರೆ.
ತುಪ್ಪದ ಕಲಬೆರಕೆ ಆರೋಪ ಘೋರವಾಗಿದೆ. ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳ ಜೊತೆಗೆ ಆಟವಾಡುವುದು ಸರಿಯೇ? ಎಂದು ಜಗನ್ ಇದೇ ವೇಳೆ ಪ್ರಶ್ನಿಸಿದ್ದಾರೆ.
ಲಡ್ಡು ವಿವಾದ: ಆಂಧ್ರ ಹೈಕೋರ್ಟ್‌ಗೆ ಜಗನ್ ಪಕ್ಷ
ವಿಜಯವಾಡ: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆ ಇತ್ತೆಂಬ ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಗನ್ಮೋಹನ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಆಂಧ್ರ ಹೈಕೋರ್ಟ್ ಮೊರೆ ಹೋಗಿದೆ.
ನಾಯ್ಡು ಮಾಡಿರುವ ಆರೋಪಗಳ ಬಗ್ಗೆ ಹಾಲಿ ಜಡ್ಜ್ ನೇತೃತ್ವದ ತನಿಖಾ ಸಮಿತಿ ರಚಿಸಬೇಕು ಅಥವಾ ಕೋರ್ಟ್‌ನಿಂದ ರಚನೆಗೊಳಗಾದ ಸಮಿತಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ವೈಎಸ್ಸಾರ್ ಕಾಂಗ್ರೆಸ್ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಎಂದು ಪರಿಗಣಿಸಿ ಸೆ.25ರ ಬುಧವಾರ ವಿಚಾರಣೆ ನಡೆಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಈಗಾಗಲೇ ವೈಎಸ್ಸಾರ್ ಕಾಂಗ್ರೆಸ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ.
ಸನಾತನ ಧರ್ಮ ರಕ್ಷಣಾ ಸಮಿತಿ ರಚನೆಗೆ ಪವನ್ ಆಗ್ರಹ
ವಿಜಯವಾಡ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂಬ ಲ್ಯಾಬ್ ವರದಿ ಆಘಾತ ತಂದಿದೆ. ಈ ಬಗ್ಗೆ ಹಿಂದಿನ ವೈಎಸ್ಸಾರ್ ಕಾಂಗ್ರೆಸ್ ಅವಧಿಯಲ್ಲಿ ರಚನೆಯಾದ ಟಿಟಿಡಿ ಉತ್ತರ ನೀಡಬೇಕು. ಸನಾತನ ಧರ್ಮ ರಕ್ಷಣೆಗಾಗಿ ಸನಾತನ ಧರ್ಮ ರಕ್ಷಣಾ ಸಮಿತಿ ರಚಿಸಬೇಕು ಎಂದು ಆಂಧ್ರ ಡಿಸಿಎಂ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ.