ಸಾರಾಂಶ
ಆಂಧ್ರ ಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿ ತೆರೆದಿಡುವುದನ್ನು ಮುಂದುವರೆಸಿರುವ ಆಡಳಿತಾರೂಢ ಟಿಡಿಪಿ, ಎಗ್ ಪಫ್ ಸೇವನೆಗಾಗಿ ಜಗನ್ ಸರ್ಕಾರ 5 ವರ್ಷದಲ್ಲಿ 3.62 ಕೋಟಿ ರು. ಖರ್ಚು ಮಾಡಿರುವುದಾಗಿ ಆರೋಪಿಸಿದೆ.
ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ವೈಎಸ್ಸಾರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿ ತೆರೆದಿಡುವುದನ್ನು ಮುಂದುವರೆಸಿರುವ ಆಡಳಿತಾರೂಢ ಟಿಡಿಪಿ, ಎಗ್ ಪಫ್ ಸೇವನೆಗಾಗಿ ಜಗನ್ ಸರ್ಕಾರ 5 ವರ್ಷದಲ್ಲಿ 3.62 ಕೋಟಿ ರು. ಖರ್ಚು ಮಾಡಿರುವುದಾಗಿ ಆರೋಪಿಸಿದೆ.
ಇದರ ಪ್ರಕಾರ ಸಿಎಂ ಕಚೇರಿ ಪ್ರತಿ ವರ್ಷ ಇದಕ್ಕಾಗಿ 72 ಲಕ್ಷ ರು. ವ್ಯಯಿಸಿ 20 ರು. ಬೆಲೆಯ ಎಗ್‌ಪಫ್ ತರಿಸುತ್ತಿತ್ತು. 5 ವರ್ಷದಲ್ಲಿ 18 ಲಕ್ಷ ಎಗ್‌ಪಫ್ ತಿನ್ನಲಾಗಿದೆ. ಅಂದರೆ ದಿನಕ್ಕೆ 993 ಎಗ್‌ಪಫ್ ತಿಂದಂತೆ. ಇದು ಎಗ್‌ಪಫ್ ಹಗರಣ ಇದ್ದಂತೆ ಎಂದು ತೆಲುಗುದೇಶಂ ಟೀಕಿಸಿದೆ.
ಜಗನ್ ತಮ್ಮ ವೈಯುಕ್ತಿಕ ಸುಖಕ್ಕಾಗಿ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದು ಅದು ಹೇಳಿದೆ. ಈ ಮೊದಲು ಜಗನ್ ಜನರ ದುಡ್ಡಿನಲ್ಲಿ ಖಾಸಗಿ ಅರಮನೆ ನಿರ್ಮಿಸಿಕೊಂಡಿದ್ದ ಬಗ್ಗೆಯೂ ಆರೋಪಿಸಲಾಗಿತ್ತು.
ಆದರೆ ಈ ಆರೋಪವನ್ನು ಜಗನ್‌ರ ವೈಎಸ್ದಾರ್ ಕಾಂಗ್ರೆಸ್ ಪಕ್ಷ ತಳ್ಳಿಹಾಕಿದೆ. 2014ರಿಂದ 2019ರವರೆ ನಾಯ್ಡು ಸ್ನ್ಯಾಕ್ಸ್‌ಗೆಂದು 8.5 ಕೋಟಿ ರು. ಖರ್ಚು ಮಾಡಿದ್ದರು ಎಂದು ಪ್ರತ್ಯಾರೋಪ ಮಾಡಿದೆ.