ಸಾರಾಂಶ
52 ವರ್ಷದ ಈ ವ್ಯಕ್ತಿ ಕಳೆದ 7 ವರ್ಷಗಳಿಂದ ಹಲ್ಲುಸೆಟ್ ಬಳಸುತ್ತಿದ್ದರು. ಕಾಲಕ್ರಮೇಣ ಅದು ಸಡಿಲವಾಗಿದ್ದು, ಅವರು ನಿದ್ರಿಸುತ್ತಿದ್ದಾಗ ಶ್ವಾಸಕೋಶಗಳ ಒಳಗೆ ಹೋಗಿದೆ.
ಅಮರಾವತಿ: ವ್ಯಕ್ತಿಯೊಬ್ಬ ನಿದ್ದೆಯಲ್ಲಿದ್ದಾಗ ತನ್ನ ಹಲ್ಲು ಸೆಟ್ ನುಂಗಿದ್ದು, ಅದು ಆತನ ಶ್ವಾಸಕೋಶದಲ್ಲಿ ಸಿಲುಕಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
52 ವರ್ಷದ ಈ ವ್ಯಕ್ತಿ ಕಳೆದ 7 ವರ್ಷಗಳಿಂದ ಹಲ್ಲುಸೆಟ್ ಬಳಸುತ್ತಿದ್ದರು. ಕಾಲಕ್ರಮೇಣ ಅದು ಸಡಿಲವಾಗಿದ್ದು, ಅವರು ನಿದ್ರಿಸುತ್ತಿದ್ದಾಗ ಶ್ವಾಸಕೋಶಗಳ ಒಳಗೆ ಹೋಗಿದೆ. ಇದರಿಂದಾಗಿ ಅವರಿಗೆ ಕೆಮ್ಮು ಶುರುವಾಗಿದ್ದು, ಚಿಕಿತ್ಸೆಗಾಗಿ ವಿಶಾಖಪಟ್ಟಣಂನ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್ ನಡೆಸಿದ ವೈದ್ಯರು ಬ್ರಾಂಕೋಸ್ಕೋಪಿಯ ಮೂಲಕ ಹಲ್ಲು ಸೆಟ್ ಅನ್ನು ಹೊರತೆಗೆದಿದ್ದಾರೆ.
ಈ ಕುರಿತು ಮಾತನಾಡಿದ ಡಾ। ಸಿ.ಎಚ್. ಭರತ್, ‘ರೋಗಿಯ ಎಡ ಶ್ವಾಶಕೋಶ ಹಾಗೂ ಬಲಗಡೆಯ ಕೆಲ ಭಾಗಗಳು ಸಾಮಾನ್ಯ ಸ್ಥಿತಿಯಲ್ಲಿದ್ದ ಕಾರಣ ಹಲ್‌ಸೆಟ್ ನುಂಗಿದ ಬಳಿಕವೂ ಅವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಸೆಟ್‌ನ ಬದಿಗಳಲ್ಲಿ ತಂತಿಯಿರುವ ಕಾರಣ ಹೊರತೆಗೆಯುವಾಗ ಶ್ವಾಶಕೋಶಕ್ಕೆ ಹಾನಿಯಾಗುವ ಅಪಾಯವಿತ್ತು. ಅದೃಷ್ಟವಶಾತ್ ಹಾಗಾಗಲಿಲ್ಲ’ .