ಸಾರಾಂಶ
ತಿರುಮಲ: ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂಬ ಸಿಎಂ ಚಂದ್ರಬಾಬು ನಾಯ್ಡು ಆರೋಪಕ್ಕೆ ತಿರುಗೇಟು ನೀಡಲು ಇದೀಗ ಜಗನ್ ತಿರುಪತಿ ಭೇಟಿ ಹಮ್ಮಿಕೊಂಡಿದ್ದಾರೆ. ನಾಯ್ಡು ಹೇಳಿಕೆಯಿಂದ ದೇಗುಲಕ್ಕೆ ಅವಮಾನವಾಗಿದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ಶನಿವಾರ ದೇಗುಲಕ್ಕೆ ಭೇಟಿ ನೀಡುತ್ತಿರುವುದಾಗಿ ಜಗನ್ ಘೋಷಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವಂತೆ ಜಗನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಲಡ್ಡು ಕಲಬೆರಕೆ ಹಿನ್ನೆಲೆ: ಸಿಹಿ ಪದಾರ್ಥದ ಬದಲು ಹಣ್ಣು-ಕಾಯಿ ತರಲು ಆದೇಶ
ಪ್ರಯಾಗರಾಜ್: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಯಾಗರಾಜಕ್ಕೆ ಭೇಟಿ ನೀಡುವ ಭಕ್ತರು ನೈವೇದ್ಯಕ್ಕೆ ಸಿಹಿ ಪದಾರ್ಥ ಮತ್ತು ಸಂಸ್ಕರಿಸಿದ ವಸ್ತುಗಳ ಬದಲು ತೆಂಗಿನಕಾಯಿ, ಹಣ್ಣು ಅಥವ ಒಣ ಹಣ್ಣುಗಳನ್ನು ತರಬೇಕು ಎಂದು ದೇವಸ್ಥಾನದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಅಲೋಪ್ ಶಂಕರಿ ದೇವಿ, ಬಡೇ ಹನುಮಾನ್, ಮನಕಾಮೇಶ್ವರ್, ಲಲಿತಾ ದೇವಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಸಿಹಿ ಪದಾರ್ಥದ ಮೇಲೆ ನಿಷೇಧ ಹೇರಲಾಗಿದೆ. ಜೊತೆಗೆ ದೇವಸ್ಥಾನದ ವತಿಯಿಂದ ಶುದ್ಧ ಪ್ರಸಾದ ತಯಾರಿಸಿ ವಿತರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಮಧ್ಯಪ್ರದೇಶದಲ್ಲಿ 5500 ಕೇಜಿ ನಕಲಿ ತುಪ್ಪ ವಶ
ಇಂದೋರ್: ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಿಕೆಯಾಗಿದೆ ಎಂಬ ಆರೋಪ ಕೇಳಿಬರುತ್ತಿರುವ ಹೊತ್ತೊನಲ್ಲೇ ಮಧ್ಯಪ್ರದೇಶದ ಇಂದೋರ್‌ನಲ್ಲಿ 5500 ಕೇಜಿಗೂ ಹೆಚ್ಚಿನ ನಕಲಿ ತುಪ್ಪವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಇಂದೋರ್ ಆಹಾರ ಇಲಾಖೆಯು ಖಾಸಗಿ ಕಂಪನಿಯ ಮೇಲೆ ದಾಳಿ ನಡೆಸಿದ್ದು, 5500 ಕೇಜಿಗೂ ಹೆಚ್ಚು ನಕಲಿ ತುಪ್ಪವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಳೆ ಎಣ್ಣೆ, ಸೋಯಾಬಿನ್ ಎಣ್ಣೆ ಹಾಗೂ ಇತರ ಖಾದ್ಯ ತೈಲಗಳನ್ನು ಬಳಸಿ ನಕಲಿ ತುಪ್ಪ ತಯಾರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ರೀತಿ ತಯಾರಾದ ತುಪ್ಪವನ್ನು ವಿವಿಧ ಸ್ಥಳೀಯ ಬ್ರಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.