ನೀಟ್‌ ಹಗರಣದ ‘ಸುಪ್ರೀಂ ತನಿಖೆ’ಗೆ ಕಾಂಗ್ರೆಸ್‌ ಪಟ್ಟು

| Published : Jun 14 2024, 01:05 AM IST / Updated: Jun 14 2024, 04:41 AM IST

NEET Result 2024 controversy

ಸಾರಾಂಶ

ನೀಟ್ ಪರೀಕ್ಷೆಯ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಗುರುವಾರ ಪುನರುಚ್ಚರಿಸಿದೆ ಮತ್ತು ಈ ವಿಷಯದ ಬಗ್ಗೆ ದೇಶದಲ್ಲಿನ ಕೋಪವು ಸಂಸತ್ತಿನ ಒಳಗೆಯೂ ಪ್ರತಿಧ್ವನಿಸುತ್ತದೆ ಎಂದು ಹೇಳಿದೆ.

 ನವದೆಹಲಿ :  ನೀಟ್ ಪರೀಕ್ಷೆಯ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಗುರುವಾರ ಪುನರುಚ್ಚರಿಸಿದೆ ಮತ್ತು ಈ ವಿಷಯದ ಬಗ್ಗೆ ದೇಶದಲ್ಲಿನ ಕೋಪವು ಸಂಸತ್ತಿನ ಒಳಗೆಯೂ ಪ್ರತಿಧ್ವನಿಸುತ್ತದೆ ಎಂದು ಹೇಳಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದೆ. ಈಗ ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ವಿವಾದವೊಂದನ್ನೇ ಸಮಸ್ಯೆ ಎನ್ನಲಾಗದು. ಅದರಲ್ಲಿ ರಿಗ್ಗಿಂಗ್ ನಡೆದಿದೆ, ಪೇಪರ್ ಲೀಕ್ ಆಗಿದೆ, ಭ್ರಷ್ಟಾಚಾರ ನಡೆದಿದೆ, ಮೋದಿ ಸರ್ಕಾರದ ಕ್ರಮಗಳಿಂದ ನೀಟ್ ಪರೀಕ್ಷೆಗೆ ಹಾಜರಾಗುವ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಕುರಿತು ನಮ್ಮ ಬೇಡಿಕೆಗಳನ್ನು ಕೇಂದ್ರ ಸಕಅರ್ರ ಪದೇ ಪದೇ ನಿರ್ಲಕ್ಷಿಸುತ್ತಿದೆ’ ಎಂದರು,

‘ಹೀಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮಹಾನಿರ್ದೇಶಕರನ್ನು ವಜಾ ಮಾಡಬೇಕು. ಈಗ ನೀಟ್‌ ನಡೆಸಿರುವ ಆಂತರಿಕ ತನಿಖೆ ವಿಶ್ವಾಸಾರ್ಹವಲ್ಲ. ಸಂಪೂರ್ಣ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗೌರವ್‌ ಗೊಗೋಯ್‌ ಜತೆ ಮಾತನಾಡುತ್ತ ಖರ್ಗೆ ನುಡಿದರು.

ಇದೇ ವೇಳೆ, ‘10ನೇ ಕ್ಲಾಸ್‌ ಹುಡುಗರ ಜತೆ ಪರೀಕ್ಷಾ ಪೇ ಚರ್ಚಾ ನಡೆಸುವ ಪ್ರಧಾನಿ ನರೇಂದ್ರ ಮೋದಿ ಈಗ ಏನು ಮಾಡುತ್ತಿದ್ದಾರೆ? ‘ನೀಟ್ ಹಗರಣ’ದತ್ತ ಗಮನ ಹರಿಸುವ ಬದಲು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ವಿದೇಶ ಪ್ರವಾಸಕ್ಕೆ ತೆರಳುವುದರಲ್ಲಿ ನಿರತರಾಗಿದ್ದಾರೆ’ ಎಂದು ಗೌರವ್‌ ಗೊಗೋಯ್‌ ಟೀಕಿಸಿದರು.