ಸಾರಾಂಶ
ನವದೆಹಲಿ : ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಿಂದ (ಆರ್‌ಎಫ್‌ಎಚ್‌ಎಲ್) ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪದ ಮೇಲೆ ಉದ್ಯಮಿ ಅನಿಲ್ ಅಂಬಾನಿ ಮತ್ತು 24 ಇತರರನ್ನು ಷೇರುಪೇಟೆಯಿಂದ 5 ವರ್ಷಗಳ ಕಾಲ ಮಾರುಕಟ್ಟೆ ನಿಯಂತ್ರಕ ‘ಸೆಬಿ’ ನಿರ್ಬಂಧಿಸಿದೆ.
ಹೆಚ್ಚುವರಿಯಾಗಿ, ಸೆಬಿಯು ಅಂಬಾನಿ ಮೇಲೆ 25 ಕೋಟಿ ರು. ವಿಧಿಸಿದೆ ಮತ್ತು 5 ವರ್ಷಗಳವರೆಗೆ ಯಾವುದೇ ಲಿಸ್ಟೆಡ್ ಕಂಪನಿ ಅಥವಾ ಸೆಬಿ-ನೋಂದಾಯಿತ ಕಂಪನಿಗಳಲ್ಲಿ ನಿರ್ದೇಶಕರಾಗಿ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ (ಕೆಎಂಪಿ) ಸೇವೆ ಸಲ್ಲಿಸುವುದನ್ನು ನಿರ್ಬಂಧಿಸಿದೆ.ಇದಲ್ಲದೆ, 24 ಕಂಪನಿನಗಳ ಮೇಲೆ 21 ರಿಂದ 25 ಕೋಟಿ ರು.ವರೆಗೆ ದಂಡ ವಿಧಿಸಲಾಗಿದೆ. ಅಲ್ಲದೆ, ನಿಯಂತ್ರಕವು ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಿದೆ ಮತ್ತು ಅದರ ಮೇಲೆ 6 ಲಕ್ಷ ರು. ದಂಡ ವಿಧಿಸಿದೆ.
ಅನಿಲ್ ಮಾಡಿದ್ದೇನು?: ಆರ್‌ಎಫ್ಎಚ್‌ಎಲ್ ಕಂಪನಿಯು ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಬಳಸಲಾಗಿದೆ ಎಂದು ಆರೋಪಿಸಿ ಹಲವಾರು ದೂರುಗಳು ಸೆಬಿಗೆ ಬಂದಿದ್ದವು. ಹೀಗಾಗಿ ಸೆಬಿ 2018-19ರ ಹಣಕಾಸು ವರ್ಷದ ಸವಧಿಯಲ್ಲಿ ತನಿಖೆ ನಡೆಸಿತ್ತು.ಆಗ ಆರ್‌ಎಚ್‌ಎಫ್‌ಎಲ್ ವ್ಯವಸ್ಥಾಪಕ ಸಿಬ್ಬಂದಿಗಳಾದ ಅಮಿತ್ ಬಾಪ್ನಾ, ರವೀಂದ್ರ ಸುಧಾಲ್ಕರ್ ಮತ್ತು ಪಿಂಕೇಶ್ ಆರ್ ಷಾ ಅವರ ಸಹಾಯದಿಂದ ಅನಿಲ್ ಅಂಬಾನಿ ಅವರು ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಬೇರೆಡೆ ತಿರುಗಿಸಿದ್ದರು. ತಮಗೆ ಸಂಬಂಧಿಸಿದ ಇತರ ಕಂಪನಿಗಳು ಸಾಲ ಪಡೆದುಕೊಂಡಿವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರ್‌ಎಫ್‌ಎಚ್‌ಎಲ್ ಹಣವನ್ನು ಇತರ ಕಂಪನಿಗಳಿಗೆ ನೀಡಿದ್ದರು ಎಂದು ಸೆಬಿ ನಡೆಸಿದ ತನಿಖೆಯಲ್ಲಿ ಸಾಬೀತಾಗಿತ್ತು.
ಅನಿಲ್ ಷೇರುಗಳು ಭಾರಿ ಕುಸಿತ : ಅನಿಲ್ ಅಂಬಾನಿ ಮೇಲೆ ಸೆಬಿ ನಿಷೇಧ ಹೇರಿದೆ ಎಂಬ ಸುದ್ದಿಯ ಬೆನ್ನಲ್ಲೇ ಅವರ ಆರ್‌ಎಫ್ಎಚ್‌ಎಲ್ ಷೇರು ಬೆಲೆಗಳು ಶೇ.5ರಷ್ಟು, ರಿಲಯನ್ಸ್ ಇನ್‌ಫ್ರಾ ಷೇರುಗಳು ಶೇ.11ರಷ್ಟು, ರಿಲಯನ್ಸ್ ಪವರ್ ಷೇರುಗಳು ಶೇ.5ರಷ್ಟು ಕುಸಿತ ಕಂಡಿವೆ.