ಸಾರಾಂಶ
ನವದೆಹಲಿ: ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ್ದ ಕೊಯಮತ್ತೂರು ಮೂಲದ ಲಾಟರಿ ಕಿಂಗ್ ಸ್ಯಾಂಟಿಯಾಗೋ ಮಾರ್ಟಿನ್ ವಾರ್ಷಿಕ 15,000 ಕೋಟಿ ರು. ವಹಿವಾಟು ಹೊಂದಿದ್ದ ಎಂಬ ಸ್ಫೋಟಕ ಮಾಹಿತಿಯು ಜಾರಿ ನಿರ್ದೇಶನಾಲಯದ ತನಿಖೆ ವೇಳೆ ತಿಳಿದುಬಂದಿದೆ.
ಭೂಮಿ ಖರೀದಿಗಾಗಿಯೇ ಮಾರ್ಟಿನ್ 350 ಕಂಪನಿಗಳು ಮತ್ತು ವಿಶೇಷ ವಾಹನಗಳನ್ನು ಸಿದ್ಧಪಡಿಸಿದ್ದ. ಭೂಮಿ ಖರೀದಿಗೆ ಲಾಟರಿಯಿಂದ ಬಂದ ಹಣವನ್ನೇ ಕೊಡುತ್ತಿದ್ದ. ಅದಕ್ಕಾಗಿ ಲಾಟರಿ ವಿತರಣೆಗೆ, ಮೇಲುಸ್ತುವಾರಿಯಾಗಿ ತನ್ನ ಸಂಬಂಧಿಕರನ್ನೇ ನೇಮಿಸಿಕೊಂಡು, ಡ್ರಾ ಆಗುವ ಲಾಟರಿಯನ್ನು ಹಾಗೇ ಉಳಿಸಿಕೊಳ್ಳುತ್ತಿದ್ದ ಎಂದು ಇ.ಡಿ. ಹೇಳಿದೆ. ಸುಪ್ರೀಂ ಕೋರ್ಟ್‌ನಿಂದ ನಿಷೇಧಗೊಂಡಿದ್ದ ಚುನಾವಣಾ ಬಾಂಡ್ ಮೂಲಕ ಮಾರ್ಟಿನ್ 1368 ಕೋಟಿ ರು. ದೇಣಿಗೆ ನೀಡಿದ್ದ. ಅದರಲ್ಲಿ ಟಿಎಂಸಿಗೆ ಅತಿ ಹೆಚ್ಚು 542 ಕೋಟಿ ನೀಡಿದ್ದ.
ಸಿಎಂ ಅತಿಶಿ ವಿರುದ್ಧ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಕಣಕ್ಕೆ
ನವದೆಹಲಿ: ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೇವಲ ಒಂದು ಅಭ್ಯರ್ಥಿಯನ್ನು ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಅಲ್ಕಾ ಲಾಂಬ ಅವರನ್ನು ಪಕ್ಷ ಕಣಕ್ಕಿಳಿಸಿದೆ.
ದೆಹಲಿ ಸಿಎಂ ಅತಿಶಿ ಸಹ ಕಲ್ಕಾಜಿ ಕ್ಷೇತ್ರದಿಂದ ಗೆದ್ದು ಗದ್ದುಗೆ ಏರಿದ್ದು, ಇವರನ್ನು ಸೋಲಿಸಲು ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಲ್ಕಾ ಲಾಂಬ ಅವರು 2015ರಲ್ಲಿ ಚಾಂದಿನಿ ಚೌಕ್‌ನಿಂದ ಆಪ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2019ರಲ್ಲಿ ಕಾಂಗ್ರೆಸ್ ಸೇರಿದ್ದರು. 70 ಕ್ಷೇತ್ರಗಳ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ 47 ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಲ್ತುಳಿತಕ್ಕೆ ಮಹಿಳೆ ಬಲಿ: ನಟ ಅಲ್ಲು ಅರ್ಜುನ್ ಷರತ್ತಿನ ಜಾಮೀನು
ಹೈದರಾಬಾದ್: ಪುಷ್ಪಾ-2 ಸಿನಿಮಾದ ರಿಲೀಸ್ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಟ ಅಲ್ಲು ಅರ್ಜುನ್‌ಗೆ ಜಾಮೀನು ನೀಡಿದೆ.
ಅಲ್ಲದೇ ತನ್ನ ಅನುಮತಿಯಿಲ್ಲದೇ ವಿದೇಶಕ್ಕೆ ಪ್ರಯಾಣಿಸಬಾರದು, ಜಾರ್ಜ್‌ಶೀಟ್ ಸಲ್ಲಿಕೆಯಾಗುವ ತನಕ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ 1 ಗಂಟೆಯ ಒಳಗಡೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ತನಿಖೆಗೆ ಅಡ್ಡಿಪಡಿಸಬಾರದು, ಸಾಕ್ಷಿಗೆ ಬೆದರಿಕೆ ಹಾಕಬಾರದು, ತನಿಖೆಗೆ ಸಹಕರಿಸಬೇಕು, ಪ್ರಕರಣದ ಇತ್ಯರ್ಥವಾಗುವವರೆಗೆ ನ್ಯಾಯಾಲಯದ ಸಮ್ಮತಿಯಿಲ್ಲದೆ ತನ್ನ ನಿವಾಸದ ವಿಳಾಸವನ್ನು ಬದಲಾಯಿಸಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಬಜೆಟ್ ಅಧಿವೇಶನದ ವೇಳೆಗೂ ವಕ್ಪ್ ಕಾಯ್ದೆ ಮಂಡನೆ ಅನುಮಾನ
ನವದೆಹಲಿ: ವಕ್ಫ್ ಕಾಯ್ದೆ ತಿದ್ದುಪಡಿಗೆ ರಚಿಸಿರುವ ಸಂಸತ್ತಿನ ಜಂಟಿ ಸದನ ಸಮಿತಿ, ಇನ್ನೂ ತನ್ನ ಕೆಲಸ ಪೂರ್ಣಗೊಳಿಸದ ಕಾರಣ ಮುಂಬರುವ ಬಜೆಟ್ ಅಧಿವೇಶನದಲ್ಲಿ ವಕ್ಫ್ ಕಾಯ್ದೆ ಮಂಡನೆ ಆಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಜ.30ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು. ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಗೆ ಅಷ್ಟರೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಅಧಿವೇಶನ ಕೊನೆಗೊಳ್ಳುವ ಫೆ.12ರಂದು ವರದಿ ಸಲ್ಲಿಸುವ ಸಾಧ್ಯತೆಯಿದೆ. ಹೀಗಾಗಿ ಬಜೆಟ್ ಅಧಿವೇಶನದ ವೇಳೆ ವಕ್ಫ್ ಕಾಯ್ದೆ ಮಂಡನೆಯಾಗುವುದು ಕಷ್ಟ. ಎನ್‌ಡಿಎ ಮಿತ್ರ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಈ ಕಾನೂನಿಗೆ ಅಪಸ್ವರ ಎತ್ತಿದ್ದು, ಇದು ಕೂಡ ಕಾಯ್ದೆ ಮಂಡನೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.