ಸಾರಾಂಶ
ಪಟನಾ: ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರೆದಿದ್ದು, ಗುರುವಾರ ಮತ್ತೊಂದು ಸೇತುವೆ ಕುಸಿದಿದೆ. ಇದು ಕಳೆದ 15 ದಿನದಲ್ಲಿ ಸಂಭವಿಸಿದ 10ನೇ ಸೇತುವೆ ದುರಂತವಾಗಿದೆ. ಸರಣ್ ಜಿಲ್ಲೆಯಲ್ಲಿ ಮತ್ತೊಂದು ಸೇತುವೆ ಕುಸಿದಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅಮನ್ ಸಮೀರ್, ‘ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 3 ಸೇತುವೆ ಕುಸಿದಿದೆ. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಲಾಗುವುದು. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಮೂರು ಸೇತುವೆ ಕುಸಿತ ಪ್ರಕರಣದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಸರಣ್ ಮತ್ತು ಪಕ್ಕದ ಸಿವಾನ್ ಜಿಲ್ಲೆಯ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತಿದ್ದ ಈ ಸೇತುವೆಯನ್ನ 15 ವರ್ಷಗಳ ಹಿಂದೆ ಗಂಡಕಿ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು.
ಸ್ಥಳೀಯರ ಪ್ರಕಾರ, ಕಳೆದ ಕೆಲವು ದಿನದಿಂದ ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಈ ಕಾರಣಕ್ಕೆ ಸೇತುವೆ ಕುಸಿದಿರಬಹುದು ಎನ್ನಲಾಗಿದೆ.
ರಾಜ್ಯದ ಸಿವಾನ್, ಸರಣ್, ಅರಾರಿಯಾ, ಪೂರ್ವ ಚಂಪಾರಣ್, ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಈ ಸೇತುವೆ ಕುಸಿತದ ಘಟನೆಗಳು ಸಂಭವಿಸಿವೆ.
ಈ ನಡುವೆ ದುರಸ್ತಿಯ ಅಗತ್ಯವಿರುವ ಸೇತುವೆಗಳನ್ನು ಗುರುತಿಸಿ ಕೂಡಲೇ ಅವುಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.