ಬಾಂಗ್ಲಾ : ಬಂಧಿತರಾಗಿರುವ ಸನ್ಯಾಸಿಗಳ ಜಾಮೀನಿನ ತ್ವರಿತ ವಿಚಾರಣೆಗೆ ಮತ್ತೊಂದು ಅರ್ಜಿ

| Published : Dec 13 2024, 12:45 AM IST / Updated: Dec 13 2024, 04:31 AM IST

ಸಾರಾಂಶ

ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾದಲ್ಲಿ ಬಂಧಿತರಾಗಿರುವ ಇಸ್ಕಾನ್ ಸನ್ಯಾಸಿಗಳ ಜಾಮೀನು ಅರ್ಜಿಯನ್ನ ತ್ವರಿತವಾಗಿ ಇತ್ಯರ್ಥಗೊಳಿಸಬೇಕೆಂದು ಚಿನ್ಮಯ್‌ ದಾಸ್‌ ಪರ ವಕೀಲರು ಗುರುವಾರ ಬಾಂಗ್ಲಾ ನ್ಯಾಯಾಲಯಕ್ಕೆ ಹೊಸ ಮನವಿಯನ್ನು ಸಲ್ಲಿಸಿದ್ದಾರೆ.

ಢಾಕಾ: ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾದಲ್ಲಿ ಬಂಧಿತರಾಗಿರುವ ಇಸ್ಕಾನ್ ಸನ್ಯಾಸಿಗಳ ಜಾಮೀನು ಅರ್ಜಿಯನ್ನ ತ್ವರಿತವಾಗಿ ಇತ್ಯರ್ಥಗೊಳಿಸಬೇಕೆಂದು ಚಿನ್ಮಯ್‌ ದಾಸ್‌ ಪರ ವಕೀಲರು ಗುರುವಾರ ಬಾಂಗ್ಲಾ ನ್ಯಾಯಾಲಯಕ್ಕೆ ಹೊಸ ಮನವಿಯನ್ನು ಸಲ್ಲಿಸಿದ್ದಾರೆ. 

ಬುಧವಾರವಷ್ಟೇ ನ್ಯಾಯಾಲಯ ಇದೇ ರೀತಿಯ ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ವಕೀಲ ರವೀಂದ್ರ ಘೋಷ್‌ ಅವರು ಬಂಧಿತ ಸನ್ಯಾಸಿಗಳ ಜಾಮೀನು ಅರ್ಜಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಚಟ್ಟೋಗ್ರಾಮ್‌ ಮೆಟ್ರೋಪಾಲಿಟಿನ್ ಸೆಷನ್ಸ್‌ ನ್ಯಾಯಾಲಯಕ್ಕೆ ಕೋರಿದ್ದಾರೆ.

ಢಾಕಾ: ಬಾಂಗ್ಲಾದೇಶದ ಸ್ಥಾಪಕ ಬಂಗಬಂಧು ಮುಜಿಬುರ್‌ ರೆಹಮಾನ್‌ ಅವರು ಜನಪ್ರಿಯಗೊಳಿಸಿದ್ದ ‘ಜಯ್‌ ಬಾಂಗ್ಲಾ’ ಎಂಬುದನ್ನು ರಾಷ್ಟ್ರೀಯ ಘೋಷಣೆಯಾಗಿ ಅಳವಡಿಸಿಕೊಳ್ಳುವ ಹೈಕೋರ್ಟ್‌ ಆದೇಶವನ್ನು ಅಲ್ಲಿನ ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ. 

ಪ್ರಧಾನಿಯಾಗಿದ್ದ ಶೇಖ್‌ ಹಸೀನಾ ಪಲಾಯನದ ನಂತರ ಅವರ ತಂದೆ ಮುಜಿಬುರ್‌ರ ಗುರುತುಗಳನ್ನು ಅಳಿಸಲು ಮುಂದಾಗಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ, ಜಯ್‌ ಬಾಂಗ್ಲಾವನ್ನು ರಾಷ್ಟ್ರೀಯ ಘೋಷಣೆಯಾಗಿ ಬಳಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ತಡೆಹಿಡಿಯುವಂತೆ ಕೋರಿ ಡಿ.2ರಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ‘ಜಯ್‌ ಬಾಂಗ್ಲಾ’ವನ್ನು ದೇಶದ ರಾಷ್ಟ್ರೀಯ ಘೋಷಣೆಯಾಗಿ ಅಳವಡಿಸಿಕೊಂಡು ಅದನ್ನು ಸರ್ಕಾರಿ ಕೆಲಸಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವಂತೆ 2020ರ ಮಾ.10ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಅದನ್ನು ಹಸೀನಾ ಸರ್ಕಾರ ಹಾಗೂ ಅವರ ಪಕ್ಷ 2022ರಲ್ಲಿ ಗುರುತಿಸಿ ನೋಟಿಸ್‌ ಜಾರಿಗೊಳಿಸಿತ್ತು.

ಸಿರಿಯಾ ಮೇಲೆ ಇಸ್ರೇಲ್‌ ದಾಳಿ: 80% ಸೇನಾ ಆಸ್ತಿಗಳ ನಾಶ

ಡಮಾಸ್ಕಸ್‌: ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ನಿರ್ಗಮಿಸುತ್ತಿದ್ದಂತೆ ಕಳೆದೆರಡು ದಿನಗಳಲ್ಲಿ ಸಿರಿಯಾ ಸೇನಾ ನೆಲೆಗಳ ಮೇಲೆ 400ಕ್ಕೂ ಅಧಿಕ ವಾಯುದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್‌ ಹೇಳಿದೆ ಹಾಗೂ ಸೇನಾ ನೆಲೆಗಳು ಉಗ್ರರ ಪಾಲಾಗಬಾರದು ಎಂಬ ಕಾರಣಕ್ಕೆ ಸೇನೆಯ ಶೇ.80ರಷ್ಟು ಆಸ್ತಿಗಳನ್ನು ನಾಶ ಮಾಡಿದೆ.

‘ಸಿರಿಯಾದಲ್ಲಿರುವ ಶಸ್ತ್ರಾಸ್ತ್ರಗಳು ಬಂಡುಕೋರರ ಕೈ ಸೇರುವುದನ್ನು ತಡೆಯುವ ಸಲುವಾಗಿ ಶೇ.70ರಿಂದ 80ರಷ್ಟು ಸೇನಾ ಆಸ್ತಿಪಾಸ್ತಿಗಳನ್ನು ವಾಯು ದಾಳಿ ನಡೆಸಿ ನಾಶಪಡಿಸಿದ್ದೇವೆ. ಈವರೆಗೆ 80ರಿಂದ 190 ಕಿಮೀ ರೇಜ್‌ನ 12ಕ್ಕೂ ಅಧಿಕ ಸಮುದ್ರ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇವುಗಳು ಹಾನಿಕಾರಿ ಸ್ಫೋಟಕಗಳನ್ನು ಹೊತ್ತೊಯ್ಯುವ ಪೇಲೋಡ್‌ಗಳನ್ನು ಒಳಗೊಂಡಿದ್ದವು’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.ಉಳಿದಂತೆ 15 ಹಡಗು, ಅಲ್‌-ಬಯ್ದಾ ಹಾಗೂ ಲಟಕಿಯಾ ಬಂದರಿನಂತಹ ನೌಕಾ ನೆಲೆ, ವಿಮಾನ ವಿರೋಧಿ ಉಪಕರಣ ಹಾಗೂ ಅವುಗಳ ತಯಾರಿಕ ಕೇಂದ್ರ, ಯುದ್ಧ ವಿಮಾನ, ಹೆಲಿಕಾಪ್ಟರ್‌, ರಡಾರ್‌, ಟ್ಯಾಂಕ್‌, ಸ್ಕಡ್, ಕ್ರೂಸ್‌ ಸೇರಿದಂತೆ ಹಲವು ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಗೊತ್ತುವಳಿ: ಭಾರತ ಬೆಂಬಲ

ವಿಶ್ವಸಂಸ್ಥೆ: ಗಾಜಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೊ‍ಳಿಸಬೇಕು ಮತ್ತು ಪ್ಯಾಲೆಸ್ತೀನ್‌ ನಿರಾಶ್ರಿತರ ಪರ ಕೆಲಸ ಮಾಡುವ ವಿಶ್ವಸಂಸ್ಥೆಯ ಯುಎನ್‌ಆರ್‌ಡಬ್ಯುಎ ಸಂಸ್ಥೆಯನ್ನು ಬೆಂಬಲಿಸುವ ಗೊತ್ತುವಳಿಯನ್ನು ವಿಶ್ವಸಂಸ್ಥೆಯಲ್ಲಿ ಗುರುವಾರ ಬಹುಮತದಿಂದ ಅಂಗೀಕರಿಸಲಾಯಿತು.ಭಾರತ ಈ ನಿರ್ಣಯದ ಪರ ಮತಹಾಕಿದ್ದು, ಅಮೆರಿಕ, ಇಸ್ರೇಲ್‌ ಸೇರಿ 9 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ಒಟ್ಟ 193 ಸದಸ್ಯ ಬಲದ ವಿಶ್ವಸಂಸ್ಥೆಯಲ್ಲಿ 159 ಮತಗಳು ಕದನ ವಿರಾಮ ನಿರ್ಣಯದ ಪರ ಬಿದ್ದರೆ, 9 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದವು. 13 ರಾಷ್ಟ್ರಗಳು ಮತದಾನದಿಂದ ದೂರವುಳಿದಿದ್ದವು.

ಇನ್ನು ಯುಎನ್‌ಆರ್‌ಡಬ್ಲ್ಯುಎ (ಪ್ಯಾಲೇಸ್ತೀನ್‌ ನಿರಾಶ್ರಿತರ ಪರ ವಿಶ್ವಸಂಸ್ಥೆಯ ಪರಿಹಾರ ಮತ್ತು ಕೆಲಸ ಕಾರ್ಯಗಳ ಸಂಸ್ಥೆ) ಅನ್ನು ಬೆಂಬಲಿಸುವ ನಿರ್ಣಯಕ್ಕೂ 159 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿದರೆ, 9 ರಾಷ್ಟ್ರಗಳು ವಿರೋಧಿಸಿದವು. 11 ರಾಷ್ಟ್ರಗಳು ಮತದಾನದಿಂದಲೇ ದೂರವುಳಿದಿದ್ದವು. ಯುಎನ್ಆರ್‌ಡಬಬ್ಲ್ಯುಎ ಸಂಸ್ಥೆಯ ಹಲವರು ಹಮಾಸ್‌ ಉಗ್ರರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಇಸ್ರೇಲ್‌ ಸಾಕ್ಷಿ ಸಮೇತ ಆರೋಪಿಸಿತ್ತು.

ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 5.48ಕ್ಕೆ ಇಳಿಕೆ

ನವದೆಹಲಿ: ಅಕ್ಟೋಬರ್‌ನಲ್ಲಿ ಈ ಪ್ರಮಾಣ ಶೇ.6.21 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ.5.48ಕ್ಕೆ ಇಳಿಯಾಗಿದೆ. ಆಹಾರದ ಬೆಲೆ, ಅದರಲ್ಲಿಯೂ ಪ್ರಮುಖವಾಗಿ ತರಕಾರಿಗಳ ಬೆಲೆ ಇಳಿಕೆ ಇದಕ್ಕೆ ಕಾರಣ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ.ರಾಷ್ಟ್ರೀಯ ಅಂಕಿ ಅಂಶ ಕಚೇರಿ ಬಿಡುಗಡೆ ಮಾಡಿದ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಅಂಕಿ ಅಂಶಗಳ ಪ್ರಕಾರ, ನವೆಂಬರ್‌ನಲ್ಲಿ ಆಹಾರದ ಹಣದುಬ್ಬರವು ಶೇ.9.04ಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ಇದು ಶೇ.10.87ರಷ್ಟಿತ್ತು ಮತ್ತು ಕಳೆದ ವರ್ಷದ ನವೆಂಬರ್‌ನಲ್ಲಿ ಶೇ.8.7ರಷ್ಟಿತ್ತು.