ಸಾರಾಂಶ
ಅಹಮದಾಬಾದ್: ನೀಟ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಗಂಭೀರ ವಿಷಯಗಳು ಬೆಳಕಿಗೆ ಬಂದಿವೆ. ಗುಜರಾತಿ ಭಾಷೆಯೇ ಬರದ ವಿದ್ಯಾರ್ಥಿಗಳೂ ಕೂಡಾ ಗುಜರಾತಿ ಭಾಷೆಯಲ್ಲಿ ನೀಟ್ ಪರೀಕ್ಷೆ ಬರೆದಿರುವುದು ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ.
ನೀಟ್ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಒಡಿಶಾ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಮೂಲದ ಅಭ್ಯರ್ಥಿಗಳಿಗೆ ಗುಜರಾತ್ ಅನ್ನೇ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದರು. ಅದರಂತೆ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪರವಾಗಿ ಅಕ್ರಮದಲ್ಲಿ ಸಂಚುಕೋರರೇ ಗುಜರಾತಿ ಭಾಷೆಯಲ್ಲಿ ಉತ್ತರಗಳನ್ನು ಬರೆದಿದ್ದರು ಎಂಬ ವಿಷಯ ತನಿಖೆಯಲ್ಲಿ ಕಂಡುಬಂದಿದೆ.
ನೀಟ್-ಯುಜಿ ಪರೀಕ್ಷಾ ಕೇಂದ್ರಗಳಲ್ಲಿ ಒಂದಾದ ಗೋದ್ರಾದ ಜೈ ಜಲರಾಮ್ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ಸೇರಿದಂತೆ ಐದು ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ, ಬೇರೆ ಬೇರೆ ರಾಜ್ಯಗಳ ಅಭ್ಯರ್ಥಿಗಳನ್ನು ಬೇರೆ ಬೇರೆ ರೀತಿಯಲ್ಲಿ ಸಂಪರ್ಕಿಸಲಾಗಿತ್ತು ಎಂದು ತಿಳಿಸಿದೆ. ಈಗ ಅಂತರರಾಜ್ಯ ಕೊಂಡಿಗಳನ್ನು ಬಯಲಿಗೆಳೆಯುವ ಪ್ರಯತ್ನ ನಡೆಯುತ್ತಿದೆ.
ನೀಟ್ ಹಗರಣದ ವಿಚಾರಣೆ ಜು.18ಕ್ಕೆ ಮುಂದೂಡಿಕೆ
ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು.18ಕ್ಕೆ ಮುಂದೂಡಿದೆ.ಪ್ರವೇಶ ಪರೀಕ್ಷೆ ರದ್ದು, ಮರು ಪರೀಕ್ಷೆ ಮತ್ತು ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿದ ಪ್ರತಿಕ್ರಿಯೆಗಳ ವಿವರವನ್ನು ಪ್ರಕರಣದ ಪಕ್ಷಗಾರರು ಇನ್ನೂ ಸ್ವೀಕರಿಸಿಲ್ಲ. ಹೀಗಾಗಿ ಜು.18ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿತು.ಬುಧವಾರವಷ್ಟೇ ಕೇಂದ್ರ ಸರ್ಕಾರವು ಮರುಪರೀಕ್ಷೆ ಅಗತ್ಯವಿಲ್ಲ ಎಂಬ ಅಫಿಡವಿಟ್ಟನ್ನು ಕೋರ್ಟ್‌ಗೆ ಸಲ್ಲಿಸಿತ್ತು ಹಾಗೂ ತನ್ನ ಈ ವಾದಕ್ಕೆ ಪೂರಕವಾಗಿ ಮದ್ರಾಸ್ ಐಐಟಿ, ‘ಎಲ್ಲ ಕೇಂದ್ರಗಳಲ್ಲಿ ಅಕ್ರಮ ನಡೆದಿಲ್ಲ. ಕೆಲವೇ ಕೇಂದ್ರಗಳಲ್ಲಿ ನಡೆದಿದೆ’ ಎಂದು ನೀಡಿದ್ದ ವರದಿಯನ್ನು ಲಗತ್ತಿಸಿತ್ತು.