ಸಾರಾಂಶ
ಸಿಟ್ಟಿನಲ್ಲಿ ಕೆಟ್ಟದಾಗಿ ಮಾತಾಡಿದ್ದೇನೆ: ನಿರ್ದೇಶಕಮುಂಬೈ: ಬ್ರಾಹ್ಮಣರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ. ‘ಸಿಟ್ಟಿನಲ್ಲಿ ಯಾರೋ ಒಬ್ಬರಿಗೆ ಉತ್ತರಿಸಲು ಹೋಗಿ ಕೆಟ್ಟದಾಗಿ ಮಾತಾಡಿದ್ದೇನೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.
ಬ್ರಾಹ್ಮಣರು ಮಹಾರಾಷ್ಟ್ರದಲ್ಲಿ ‘ಫುಲೆ’ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿದ್ದ ಕಶ್ಯಪ್, ಇನ್‌ಸ್ಟಾಗ್ರಾಂ ಕಮೆಂಟ್ ಒಂದಕ್ಕೆ ಉತ್ತರಿಸುವಾಗ ‘ನಾನು ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ’ ಎಂದಿದ್ದರು. ಬಳಿಕ ಕ್ಷಮೆ ಕೇಳಿದ್ದರಾದರೂ ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು.ಆದರೆ ಈಗ ಬೇಷರತ್ತಾಗಿ ಕ್ಷಮೆ ಕೇಳಿರುವ ಅವರು, ‘ಕೋಪದಲ್ಲಿ ವ್ಯಕ್ತಿಯೋರ್ವರಿಗೆ ಉತ್ತರಿಸುವಾಗ, ನನ್ನ ಇತಿಮಿತಿಗಳನ್ನು ಮರೆತು ಇಡೀ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ಮತ್ತು ನನ್ನ ಕುಟುಂಬಕ್ಕೆ ನೋವಾಗಿದೆ. ಪ್ರತಿಯೊಬ್ಬರಿಗೂ ಮನದಾಳದಿಂದ ಕ್ಷಮೆಯಾಚಿಸುತ್ತೇನೆ’ ಎಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದಾರೆ.
==ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಕಡ್ಡಾಯಕ್ಕೆ ಸರ್ಕಾರ ತಡೆ
ಮುಂಬೈ: ಮಹಾರಾಷ್ಟ್ರದಲ್ಲಿ 1ರಿಂದ 5ನೇ ತರಗತಿವರೆಗೆ ಹಿಂದಿ ಕಡ್ಡಾಯ ಕಲಿಕೆಗೆ ಭಾರಿ ವಿರೋಧ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅದಕ್ಕೆ ತಡೆ ನೀಡಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಮುಂದಿನ ಅಧಿಸೂಚನೆಯನ್ನು ಶೀಘ್ರವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಿಕ್ಷಣ ಸಚಿವ ದಾದಾ ಭುಸೆ, 1ರಿಂದ 5ನೇ ತರಗತಿವರೆಗೆ ಹಿಂದಿ ಕಡ್ಡಾಯ ಕಲಿಕೆಗೆ ತಡೆ ನೀಡಲಾಗಿದೆ. ಈ ಕುರಿತು ಶೀಘ್ರದಲ್ಲಿ ಹೊಸ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.ಕಳೆದ ವಾರ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಹಿಂದಿ ಕಡ್ಡಾಯಗೊಳಿಸಿತ್ತು. ಇದಕ್ಕೆ ಮಹಾರಾಷ್ಟ್ರ ಪ್ರತಿಪಕ್ಷಗಳು ಹಾಗೂ ಶೈಕ್ಷಣಿಕ ವರ್ಗದಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕ್ರಮಕ್ಕೆ ತಡೆ ನೀಡಲಾಗಿದೆ.==
ಅಕ್ರಮ ಹಣ ವರ್ಗಾವಣೆ ಕೇಸ್: ನಟ ಮಹೇಶ್ ಬಾಬುಗೆ ಇ.ಡಿ. ಸಮನ್ಸ್ಹೈದರಾಬಾದ್: ಸ್ಥಳೀಯ ರಿಯಲ್ ಎಸ್ಟೇಟ್ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲುಗು ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ಜಾರಿ ಮಾಡಿದೆ.ತನಿಖಾಧಿಕಾರಿಗಳ ಎದುರು ಏ.28ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.‘ಈ ಪ್ರಕರಣವು ಹೈದರಾಬಾದ್‌ನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸಾಯಿಸೂರ್ಯ ಡೆವಲಪರ್ಸ್, ಸುರಾನಾ ಗ್ರುಪ್ ಮತ್ತು ಇತರ ಕೆಲವು ಸಂಸ್ಥೆಗಳಿಗೆ ಸಂಬಂಧಿಸಿದೆ. ಮಹೇಶ್ ಬಾಬು ಇದರಲ್ಲಿ ಆರೋಪಿಯಲ್ಲ. ಆದರೆ ವಂಚಿಸಿದ ಕಂಪನಿಯೊಂದಿಗೆ 5.9 ಕೋಟಿ ರು. ವ್ಯವಹಾರ ನಡೆಸಿದ್ದಾರೆ ಎಂಬ ಕುರಿತು ಮಾಹಿತಿ ಪಡೆಯಲು ಸಮನ್ಸ್ ಜಾರಿಗೊಳಿಸಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
==ಮಸೂದೆ ಅಂಗೀಕಾರ ವಿಳಂಬ: ಸುಪ್ರೀಂಗೆ ಕೇರಳ ಮೊರೆ
ನವದೆಹಲಿ: ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ಸಹಿ ಮಾಡುವುದರಲ್ಲಿ ವಿಳಂಬ ಮಾಡುವುದರ ವಿರುದ್ಧ ತಮಿಳುನಾಡು ಸರ್ಕಾರದ ಬಳಿಕ ಕೇರಳ ಸರ್ಕಾರವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಗಳನ್ನು ಪೀಠ ಮೇ 6ರಂದು ವಿಚಾರಣೆ ನಡೆಸಲಿದೆ.ನ್ಯಾ। ಪಿ.ಎಸ್. ನರಸಿಂಹ ಮತ್ತು ನ್ಯಾ। ಜೋಯ್‌ಮಾಲಾ ಬಾಗ್ಚಿ ಅವರು ಅರ್ಜಿಯನ್ನು ವಿಚಾರಣೆ ನಡೆಸಲಿದ್ದಾರೆ.ಕೇರಳದ ಹಿಂದಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿಧಾನಸಭೆಯ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಮಾಡುವಲ್ಲಿ ತಡ ಮಾಡುತ್ತಿದ್ದಾರೆ ಎಂದು ಕೇರಳ ಸರ್ಕಾರ ಕಳೆದ ವರ್ಷವೇ ಸುಪ್ರೀಂ ಮೆಟ್ಟಿಲೇರಿತ್ತು. ಜುಲೈ 26ರಂದು ನ್ಯಾ। ಜೆ.ಬಿ.ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿತ್ತು. ಅದರ ವಿಚಾರಣೆ ದಿನಾಂಕ ಈಗ ನಿಗದಿಯಾಗಿದೆ.
==ಕೇರಳ, ಬಾಂಬೆ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ಇಮೇಲ್
ಕೊಚ್ಚಿ/ಮುಂಬೈ: ಕೇರಳ ಹೈಕೋರ್ಟ್ ಮತ್ತು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠಕ್ಕೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ.ಬಳಿಕ ಬಾಂಬ್ ನಿಷ್ಕ್ರಿಯ ಘಟಕ ಮತ್ತು ಶ್ವಾನ ದಳದ ಮೂಲಕ ಹೈಕೋರ್ಟ್‌ಗಳ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಇವು ಹುಸಿ ಬೆದರಿಕೆ ಕರೆಗಳು ಎಂದು ಸ್ಪಷ್ಟಪಡಿಸಿದ್ದಾರೆ.ಬೆದರಿಕೆ ಹಿನ್ನೆಲೆಯಲ್ಲಿ ಹೈಕೋರ್ಟ್‌ಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.