ಸಾರಾಂಶ
ಅಬಕಾರಿ ಹಗರಣದಲ್ಲಿ 50 ದಿನಗಳ ಹಿಂದೆ ಜೈಲು ಸೇರಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ (ಆಪ್) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅದರನ್ವಯ ಅವರು ಶುಕ್ರವಾರ ಸಂಜೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನವದೆಹಲಿ: ಅಬಕಾರಿ ಹಗರಣದಲ್ಲಿ 50 ದಿನಗಳ ಹಿಂದೆ ಜೈಲು ಸೇರಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ (ಆಪ್) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅದರನ್ವಯ ಅವರು ಶುಕ್ರವಾರ ಸಂಜೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಆದರೆ, ಕೇಜ್ರಿವಾಲ್ ಅವರು ಮುಖ್ಯಮಂತ್ರಿಗಳ ಕಚೇರಿಗೆ ಹೋಗುವಂತಿಲ್ಲ, ಸಚಿವಾಲಯಕ್ಕೂ ಹೋಗುವಂತಿಲ್ಲ, ಸರ್ಕಾರಿ ಕಡತಗಳಿಗೆ ಸಹಿ ಹಾಕುವಂತಿಲ್ಲ ಮತ್ತು ಜೂ.2ರಂದು ತಿಹಾರ್ ಜೈಲಧಿಕಾರಿಗಳಿಗೆ ಮತ್ತೆ ಶರಣಾಗಬೇಕು ಎಂಬ ಪ್ರಮುಖ ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ಲೋಕಸಭೆ ಚುನಾವಣೆ ಮುಕ್ತಾಯವಾಗುವವರೆಗೆ 21 ದಿನಗಳ ಕಾಲ ಕೇಜ್ರಿವಾಲ್ ಬಂಧಮುಕ್ತರಾಗಿ ಇರಲಿದ್ದಾರೆ.
ಕೇಜ್ರಿವಾಲ್ ಆಪ್ ಮುಖ್ಯಸ್ಥರಾಗಿರುವುದರಿಂದ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಲು ಅವಕಾಶ ನೀಡಬೇಕು ಎಂದು ಅವರ ಪರ ವಕೀಲ ಹಾಗೂ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ.
ಆಪ್ ಅಧಿಕಾರದಲ್ಲಿರುವ ದೆಹಲಿಯಲ್ಲಿ ಮೇ 25ರಂದು ಹಾಗೂ ಪಂಜಾಬ್‌ನಲ್ಲಿ ಜೂ.1ರಂದು ಲೋಕಸಭೆಗೆ ಮತದಾನ ನಡೆಯಲಿದೆ. ಜೂ.1ಕ್ಕೆ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನಿನ ಅವಧಿ ಮುಕ್ತಾಯಗೊಳ್ಳಲಿದೆ. ಪಕ್ಷದ ಮುಖ್ಯಸ್ಥನೇ ಜೈಲಿಗೆ ಹೋಗಿದ್ದರಿಂದ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗುವ ಆತಂಕದಲ್ಲಿದ್ದ ಆಮ್ ಆದ್ಮಿ ಪಕ್ಷದ ಮುಖಂಡರು ಇದೀಗ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಲಭಿಸಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.
‘ಬೇರೆ ಪ್ರಕರಣಗಳ ಜೊತೆ ಇದನ್ನು ಹೋಲಿಸುವುದು ಬೇಡ. ಕೇಜ್ರಿವಾಲ್ ಮಾ.21ರಂದು ಬಂಧಿತರಾಗಿದ್ದಾರೆ. ಅವರನ್ನು ಅದಕ್ಕಿಂತ ಮೊದಲೂ ಬಂಧಿಸಬಹುದಿತ್ತು ಅಥವಾ ನಂತರವೂ ಬಂಧಿಸಬಹುದಿತ್ತು. ಅವರು 21 ದಿನಗಳ ಕಾಲ ಹೊರಗಿದ್ದರೆ ಏನೂ ವ್ಯತ್ಯಾಸವಾಗುವುದಿಲ್ಲ. ಜೂ.2ರಂದು ಅವರು ಶರಣಾಗಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜಾರಿ ನಿರ್ದೇಶನಾಲಯ (ಇ.ಡಿ.) ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸಿತ್ತು ಹಾಗೂ ಬಹಳ ದಿನ ಜಾಮೀನು ನೀಡಕೂಡದು ಎಂದು ವಾದಿಸಿತ್ತು.
ಜಾಮೀನಿಗೆ 5 ಷರತ್ತುಗಳು
1. ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಗಳ ಕಚೇರಿಗೆ ಹಾಗೂ ಸಚಿವಾಲಯಕ್ಕೆ ಹೋಗುವಂತಿಲ್ಲ
2. ಯಾವುದೇ ಸರ್ಕಾರಿ ಆದೇಶಗಳಿಗೆ ಸಹಿ ಹಾಕುವಂತಿಲ್ಲ. ಲೆಫ್ಟಿನೆಂಟ್ ಗವರ್ನರ್ ಅವರ ಒಪ್ಪಿಗೆ ಅಗತ್ಯವಿರುವ ದಾಖಲೆಗಳಿಗೆ ತೀರಾ ಅಗತ್ಯವಿದ್ದರೆ ಸಹಿ ಹಾಕಬಹುದು
3. ಮಧ್ಯಂತರ ಜಾಮೀನಿನ ಅವಧಿಯಲ್ಲಿ ಅಬಕಾರಿ ಹಗರಣದ ಬಗ್ಗೆ ಏನನ್ನೂ ಮಾತನಾಡುವಂತಿಲ್ಲ
4. ಯಾವುದೇ ಸಾಕ್ಷಿಗಳ ಜೊತೆ ಸಂಪರ್ಕ ಸಾಧಿಸುವಂತಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳುವಂತಿಲ್ಲ
5. ಮಧ್ಯಂತರ ಜಾಮೀನಿಗೆ 50000 ರು. ಬಾಂಡ್ ಹಾಗೂ ಒಬ್ಬರ ಖಾತ್ರಿ ನೀಡಬೇಕು