ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಾವಳಿ - ದೋಡಾ ಎನ್ಕೌಂಟರ್: ಕ್ಯಾಪ್ಟನ್‌ ಹುತಾತ್ಮ, ಓರ್ವ ಉಗ್ರನ ಹತ್ಯೆ

| Published : Aug 15 2024, 01:55 AM IST / Updated: Aug 15 2024, 04:10 AM IST

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರಿದಿದೆ. ಸ್ವಾತಂತ್ರ್ಯ ದಿನದ ಮುನ್ನಾ ದಿನ ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಓರ್ವ ಕ್ಯಾಪ್ಟನ್‌ ಹುತಾತ್ಮರಾಗಿದ್ದು, ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರಿದಿದೆ. ಸ್ವಾತಂತ್ರ್ಯ ದಿನದ ಮುನ್ನಾ ದಿನ ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಓರ್ವ ಕ್ಯಾಪ್ಟನ್‌ ಹುತಾತ್ಮರಾಗಿದ್ದು, ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಒಬ್ಬ ನಾಗರಿಕನಿಗೂ ಗಾಯಗಳಾಗಿವೆ. ಈ ನಡುವೆ, ಓರ್ವ ಯೋಧ ಸಾವನ್ನಪ್ಪುವುದರೊಂದಿಗೆ ಮೇ ತಿಂಗಳ ಬಳಿಕ ಕಣಿವೆಯಲ್ಲಿ 17 ಸೇನಾ ಯೋಧರು ಸಾವನ್ನಪ್ಪಿದಂತಾಗಿದೆ.

ಶಿವಘರ್- ಅಸ್ಸಾರ್‌ ಬೆಲ್ಟ್‌ನಲ್ಲಿ ಅಡಗಿರುವ ಪಾಕಿಸ್ತಾನಿ ಉಗ್ರರ ಬೇಟೆಗೆಂದು ದಟ್ಟ ಅರಣ್ಯದಲ್ಲಿ ಬೆಳಗಿನ ಸಮಯದಲ್ಲಿ ಕಾವಲು ಹಾಗೂ ಶೋಧ ಕಾರ್ಯ ನಡೆಸುತ್ತಿದ್ದಾಗ ಗುಂಡಿನ ಮೊರೆತ ಕೇಳಿಬಂದಿದೆ. ಚಕಮಕಿಯಲ್ಲಿ ಕ್ಯಾ। ದೀಪಕ್‌ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೆ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದರು.

ಘಟನೆ ನಡೆದ ಸ್ಥಳದಲ್ಲಿ ನಾಲ್ಕು ರಕ್ತಸಿಕ್ತ ಚೀಲಗಳು, 1 ಎಕೆ 47 ಗನ್‌ ಹಾಗೂ ಎಮ್‌-4 ಕಾರ್ಬೈನ್‌ಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್‌ ಜೈನ್‌ ತಿಳಿಸಿದ್ದಾರೆ.

‘ಉಧಂಪುರ ಜಿಲ್ಲೆಯ ಪತ್ನಿಟಾಪ್‌ ಬಳಿಯಿರುವ ಕಾಡಿನ ಮೂಲಕ ಉಗ್ರರು ದೋಡಾ ಕಾಡಿಗೆ ನುಸುಳಿದ್ದರು. ಮಂಗಳವಾರ ಬೆಳಗ್ಗೆ 6 ಗಂಟೆಗೆ ಭದ್ರತಾ ಪಡೆಗಳು ಉಗ್ರರೊಂದಿಗೆ ಸಂಪರ್ಕ ಸಾಧಿಸಿದ್ದು, ಅದಾದ ಅರ್ಧ ಗಂಟೆಯಲ್ಲೇ ಎನ್‌ಕೌಂಟರ್‌ ಪ್ರಾರಂಭಿಸಲಾಯಿತು. ರಾತ್ರಿಯಿಡೀ ಅಲ್ಲೇ ಕಾವಲಿದ್ದು, ಮರುದಿನ ಮುಂಜಾನೆ ಮತ್ತೆ ಶೋಧ ಕಾರ್ಯವನ್ನು ಮುಂದುವರೆಸಲಾಯಿತು. ನಂತರ ದೋಡಾದಲ್ಲಿ ಗುಂಡಿನ ಚಕಮಕಿ ನಡೆಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮೊದಲು ನೌನಟ್ಟಾ ಹಾಗೂ ಬಸಂತ್‌ಘರ್‌ ಅರಣ್ಯ ಪ್ರದೇಶಗಳಲ್ಲಿ ಕೂಡ ಎನ್‌ಕೌಂಟರ್‌ ನಡೆಸಲಾಗಿತ್ತು. ಆ ವೇಳೆ ಉಗ್ರರು ದೋಡಾಗೆ ದೌಡಾಯಿಸಿದ್ದರು.

ಜು.26ರಂದು ದೋಡಾ ಜಿಲ್ಲೆಯ ಗಂದೋಹ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ್‌ ಮೂಲದ ಜೈಶ್‌-ಎ-ಮೊಹಮ್ಮದ್‌ಗೆ ಸೇರಿದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಇ.ಡಿ. ಪೂರ್ಣಾವಧಿ ಮುಖ್ಯಸ್ಥ ಆಗಿ ರಾಹುಲ್‌ ನವೀನ್‌ ನೇಮಕ

ನವದೆಹಲಿ: ಜಾರಿ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕ ರಾಹುಲ್‌ ನವೀನ್‌ ಅವರನ್ನು ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಸಂಪುಟದ ನೇಮಕಾತಿ ಸಮಿತಿ ರಾಹುಲ್‌ ಅವರನ್ನು 2 ವರ್ಷ ಅವಧಿಗೆ ನೇಮಿಸಿದೆ. ರಾಹುಲ್‌ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಇ.ಡಿ. ವಿಶೇಷ ನಿರ್ದೇಶಕ, ಹಂಗಾಮಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅವಧಿಯಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿಸಿದ್ದಾರೆ. ಈ ನಡುವೆ ಗೃಹ ಕಾರ್ಯದರ್ಶಿಯನ್ನಾಗಿ ಗೋವಿಂದ ಮೋಹನ್‌ ರನ್ನು ನೇಮಿಸಲಾಗಿದೆ.

ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ರಾಜಕೀಯ ನಿವೃತ್ತಿ

ಟೋಕಿಯೋ: ಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಕ್ಷದ ನಾಯಕನ ಹುದ್ದೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಪ್ರಕಟಿಸಿದ್ದಾರೆ. ಇದರೊಂದಿಗೆ ಜಪಾನ್‌ ಹೊಸ ಪ್ರಧಾನಿಯೊಬ್ಬರನ್ನು ಕಾಣುವುದು ಖಚಿತವಾಗಿದೆ. ಹಿಂದಿನ ಪ್ರಧಾನಿ ಶಿಂಜೋ ಅಬೆ ಹತ್ಯೆ ಬಳಿಕ ಕಿಶಿದಾ, ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿ ಪ್ರಧಾನಿ ಹುದ್ದೆ ವಹಿಸಿಕೊಂಡಿದ್ದರು. ಅವರ 3 ವರ್ಷದ ಅವಧಿ ಸೆಪ್ಟೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಆಗ ನೂತನ ನಾಯಕನ ಆಯ್ಕೆಗೆ ಮತ್ತೆ ಚುನಾವಣೆ ನಡೆಯಲಿದೆ. ಆದರೆ ಸಚಿವ ಸಂಪುಟ ಸಹದ್ಯೋಗಿಗಳ ಭಾರೀ ಭ್ರಷ್ಟಾಚಾರದ ಕಾರಣ ಕಿಶಿದಾ ಸರ್ಕಾರ ಪರವಾಗಿ ಜನಾಭಿಪ್ರಾಯ ಭಾರೀ ಕುಸಿತ ಕಂಡಿದೆ. ಭ್ರಷ್ಟಾಚಾರ ತಡೆಗೆ ಕಿಶಿದಾ ಕೈಗೊಂಡ ಯಾವುದೇ ಕ್ರಮಗಳೂ ಫಲ ಕೊಟ್ಟಿಲ್ಲ. ಅದರ ಬೆನ್ನಲ್ಲೇ ಅವರು ಪ್ರಧಾನಿ ಹುದ್ದೆ ಏರುವ ಅವಕಾಶ ತಿರಸ್ಕರಿಸಿದ್ದಾರೆ.

ಕೆಫೆ‌ ಕಾಫಿ‌ ಡೇ ದಿವಾಳಿ ಪ್ರಕ್ರಿಯೆಗೆ ಮುಂದಿನ ಆದೇಶದವರೆಗೆ ತಡೆ

ನವದೆಹಲಿ: ದಿವಂಗತ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಕೆಫೆ‌ ಕಾಫಿ‌ ಡೇ ಕಂಪನಿಯ ಐಡಿಬಿಐಗೆ ಸಂಬಂಧಿಸಿದ ದಿವಾಳಿ ಪ್ರಕ್ರಿಯೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ)ಯ ಚೆನ್ನೈನ ದ್ವಿಸದಸ್ಯ ಪೀಠ ಮುಂದಿನ ವಿಚಾರಣೆಯವರೆಗೆ ತಡೆ ನೀಡಿ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.ಈ ಮೊದಲು ಆ.8ರಂದು ಕೆಫೆ ಕಾಫಿ ಡೇ 228 ಕೋಟಿ ರು. ಕಟಬಾಕಿ ಹೊಂದಿದೆ ಎಂದು ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ಎನ್‌ಸಿಎಲ್‌ಟಿಯ ಬೆಂಗಳೂರು ಪೀಠ ಪುರಸ್ಕರಿಸಿ ಹಣ ವಸೂಲಿಗೆ ಸೂಚಿಸಿತ್ತು. ಇದಕ್ಕೆ ಈಗ ತಡೆ ನೀಡಲಾಗಿದ್ದು, ‘ ಮೂರು ವಾರಗಳ ಒಳಗಾಗಿ ಕೌಂಟರ್‌ ಅಫಿಡವಿಟ್‌ ಸಲ್ಲಿಸಲು ನಿರ್ದೇಶಿಸಲಾಗಿದೆ’ ಎಂದು ಪೀಠ ಹೇಳಿದೆ.

ಕಂಪನಿಯ ಅಮಾನತುಗೊಂಡ ಮಂಡಳಿಯ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ಮಾಳವಿಕಾ ಹೆಗ್ಡೆ ಎನ್‌ಸಿಎಲ್‌ಟಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ತೀರ್ಪು ಪ್ರಕಟಿಸಲಾಗಿದೆ.