ಜೈಷ್‌ ಮಹಿಳಾ ಘಟಕ ಸ್ಥಾಪನೆ ಸಂಚು ಬಯಲು

| Published : Nov 12 2025, 03:15 AM IST

ಸಾರಾಂಶ

ದೆಹಲಿಯ ಕೆಂಪುಕೋಟೆ ಬಳಿ ಭೀಕರ ಸ್ಫೋಟ ಸಂಭವಿಸುವ ಮುನ್ನ ಹರ್ಯಾಣದ ಫರೀದಾಬಾದ್‌ನಲ್ಲಿ ಬೃಹತ್ ಸ್ಫೋಟಕಗಳ ಜೊತೆ ಬಂಧನಕ್ಕೊಳಗಾಗಿದ್ದ ಡಾ. ಶಹೀನಾ ಶಾಹಿದ್‌, ಜೈಷ್‌-ಎ-ಮೊಹಮ್ಮದ್‌ ಉಗ್ರಸಂಘಟನೆಯ ಮಹಿಳಾ ಘಟಕದ ಜವಾಬ್ದಾರಿ ಹೊಂದಿದ್ದಳು. ಅಲ್ಲದೆ, ಈ ಘಟಕ ಸ್ಥಾಪನೆ ಹಿಂದಿನ ರೂವಾರಿ ಜೈಷ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ತಂಗಿ ಸಾದಿಯಾ ಅಜರ್‌ ಎಂಬ ಭಯಾನಕ ಸಂಗತಿಯನ್ನು ದೆಹಲಿ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಇದರೊಂದಿಗೆ ಆಪರೇಷನ್‌ ಸಿಂದೂರಕ್ಕೆ ಪ್ರತೀಕಾರವಾಗಿ ತನ್ನ ಮಹಿಳಾ ಘಟಕ ಸ್ಥಾಪಿಸಲು ಜೈಷ್‌ ಸಂಚು ರೂಪಿಸುತ್ತಿದೆ ಎಂಬ ವರದಿಗಳು ನಿಜವಾಗಿವೆ.

- ಜೈಷ್‌ ಮಹಿಳಾ ಘಟಕದ ಮುಖ್ಯಸ್ಥಳಾಗಿದ್ದ ಬಂಧಿತ ವೈದ್ಯೆ ಶಹೀನಾ!

- ಘಟಕ ಸ್ಥಾಪನೆಗೆ ಮಸೂದ್‌ ಅಜರ್‌ ತಂಗಿ ಸಾದಿಯಾ ನೇತೃತ್ವ- ಭಾರತದಲ್ಲಿ ಉಗ್ರಕೃತ್ಯ ನಡೆಸಲು ಆರಂಭವಾಗಿದ್ದ ಘಟಕ- ಭಾರತ ಘಟಕಕ್ಕೆ ಡಾ. ಶಹೀನಾಳನ್ನು ನೇಮಿಸಿದ್ದ ಉಗ್ರರು

- ಜಗತ್ತನ್ನು ‘ಸ್ವರ್ಗ’ವಾಗಿ ಪರಿವರ್ತಿಸುವ ಗುರಿಯೊಂದಿಗೆ ನೇಮಕ

- ಆಪರೇಷನ್‌ ಸಿಂದೂರಕ್ಕೆ ಪ್ರತೀಕಾರವಾಗಿ ಮಹಿಳಾ ಘಟಕ?

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಭೀಕರ ಸ್ಫೋಟ ಸಂಭವಿಸುವ ಮುನ್ನ ಹರ್ಯಾಣದ ಫರೀದಾಬಾದ್‌ನಲ್ಲಿ ಬೃಹತ್ ಸ್ಫೋಟಕಗಳ ಜೊತೆ ಬಂಧನಕ್ಕೊಳಗಾಗಿದ್ದ ಡಾ. ಶಹೀನಾ ಶಾಹಿದ್‌, ಜೈಷ್‌-ಎ-ಮೊಹಮ್ಮದ್‌ ಉಗ್ರಸಂಘಟನೆಯ ಮಹಿಳಾ ಘಟಕದ ಜವಾಬ್ದಾರಿ ಹೊಂದಿದ್ದಳು. ಅಲ್ಲದೆ, ಈ ಘಟಕ ಸ್ಥಾಪನೆ ಹಿಂದಿನ ರೂವಾರಿ ಜೈಷ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ತಂಗಿ ಸಾದಿಯಾ ಅಜರ್‌ ಎಂಬ ಭಯಾನಕ ಸಂಗತಿಯನ್ನು ದೆಹಲಿ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಇದರೊಂದಿಗೆ ಆಪರೇಷನ್‌ ಸಿಂದೂರಕ್ಕೆ ಪ್ರತೀಕಾರವಾಗಿ ತನ್ನ ಮಹಿಳಾ ಘಟಕ ಸ್ಥಾಪಿಸಲು ಜೈಷ್‌ ಸಂಚು ರೂಪಿಸುತ್ತಿದೆ ಎಂಬ ವರದಿಗಳು ನಿಜವಾಗಿವೆ.ದೇಶಾದ್ಯಂತ ಉಗ್ರಕೃತ್ಯದ ಸಂಚು ನಡೆಯುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ, ತನಿಖಾಧಿಕಾರಿಗಳು ಲಖನೌ ಮೂಲದವಳಾದ ಫರೀದಾಬಾದ್‌ನ ಅಲ್‌ ಫಲಾಹ್‌ ಆಸ್ಪತ್ರೆ ವೈದ್ಯೆ ಡಾ। ಶಹೀನಾಳ ಕಾರನ್ನು ವಶಪಡಿಸಿಕೊಂಡು ಆಕೆಯನ್ನು ಬಂಧಿಸಿದ್ದರು. ಕಾರಿನಲ್ಲಿದ್ದ ಬಂದೂಕು, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ, ಆಕೆ ಜೈಷ್‌ನ ಮಹಿಳಾ ಘಟಕವಾದ ಜಮಾತ್ ಉಲ್-ಮೋಮಿನಾತ್‌ನ ಭಾರತ ಘಟಕದ ಮುಖ್ಯಸ್ಥಳಾಗಿದ್ದಳು, ಭಾರತದೊಳಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಳು ಎಂದು ತಿಳಿದುಬಂದಿದೆ. ಯಾರೀಕೆ ಡಾ. ಶಹೀನಾ?: ಈಕೆ ಲಖನೌ ಮೂಲದವಳಾಗಿದ್ದು, ಫರೀದಾಬಾದ್‌ನ ಅಲ್‌ ಫಲಾಹ್‌ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಳು. ಕಾಶ್ಮೀರದ ಪುಲ್ವಾಮಾ ಮೂಲದ ವೈದ್ಯ ಡಾ. ಮುಜಮ್ಮಿಲ್‌ ಗನಿ ಅಲಿಯಾಸ್ ಮುಸೈಬ್ ಜೊತೆ ನಿಕಟ ಸಂಪರ್ಕದಲ್ಲಿದ್ದಳು. ಪೊಲೀಸರು ಈತನ ಮನೆಯಿಂದ 3,000 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡು, ಬಂಧಿಸಿದ್ದರು. ಈತ ಜೈಷ್‌ ಪರ ಕೆಲಸಗಳಲ್ಲಿ ತೊಡಗಿಕೊಂಡಿದ್ದ.

ಮೌಲಾನಾ ತಂಗಿಯೇ ಸಂಚಿನ ರೂವಾರಿ:ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಉಗ್ರ ಮಸೂದ್‌ ಅಜರ್‌ ನೇತೃತ್ವದ ಜೈಷ್‌-ಎ-ಮೊಹಮ್ಮದ್‌ ಸಂಘಟನೆ ಅಕ್ಟೋಬರ್‌ನಲ್ಲಿ ಜಮಾತ್ ಉಲ್-ಮೋಮಿನಾತ್‌ ಎಂಬ ಮಹಿಳಾ ಘಟಕವನ್ನು ಸ್ಥಾಪಿಸಿತ್ತು. ಜಗತ್ತನ್ನು ‘ಸ್ವರ್ಗ’ವಾಗಿ ಪರಿವರ್ತಿಸುವ ಗುರಿಯೊಂದಿಗೆ ಉಗ್ರರ ಹೆಂಡತಿಯರನ್ನು ಹಾಗೂ ಬಡಕುಟುಂಬಗಳ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು, ಅವರಿಗೆ ಭಯೋತ್ಪಾದನಾ ತರಬೇತಿ ನೀಡಲಾಗುತ್ತಿತ್ತು. ಆತ್ಮಾಹುತಿ ದಾಳಿ ನಡೆಸಲು ಸಹ ತಯಾರು ಮಾಡಲಾಗುತ್ತಿತ್ತು. ಅಜರ್‌ನ ತಂಗಿ ಸಾದಿಯಾ ಈ ಚಿಂತನೆಯ ರೂವಾರಿಯಾಗಿದ್ದಳು. ಇದರ ಭಾರತ ಘಟಕಕ್ಕೆ ಡಾ. ಶಹೀನಾಳನ್ನು ಮುಖ್ಯಸ್ಥಳನ್ನಾಗಿ ನಿಯೋಜಿಸಿ, ಉಗ್ರಕೃತ್ಯ ನಡೆಸುವ ಹೊಣೆಗಾರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಸಾದಿಯಾ ಅಜರ್‌ಳ ಗಂಡ ಯೂಸುಫ್‌ ಅಜರ್‌ ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿದ್ದ. ಆಪರೇಷನ್ ಸಿಂದೂರದ ವೇಳೆ ಈತ ಭಾರತದ ವಾಯುದಾಳಿಗೆ ಬಲಿಯಾಗಿದ್ದ.

ಶಹೀನಾ ಮೇಲೆ ಅನೇಕ ದೂರು:

ಫರೀದಾಬಾದ್‌ನಲ್ಲಿ ಭಾರೀ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಆರೋಪ ಕೇಳಿಬಂದಿರುವ ಅಲ್‌ ಫಲಾಹ್‌ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಪರ್ವೇಜ್‌ನ ಸೋದರಿ ಈ ಶಹೀನಾ ಶಾಹಿದ್‌. ಶಹೀನಾ ನಡವಳಿಕೆ ಕುರಿತು ಆಸ್ಪತ್ರೆಯಲ್ಲೂ ಸಾಕಷ್ಟು ದೂರುಗಳಿದ್ದವು. ಆಕೆ ಯಾವುದೇ ಶಿಸ್ತು ಪಾಲಿಸುತ್ತಿರಲಿಲ್ಲ. ಆಕೆಯನ್ನು ಭೇಟಿಯಾಗಲು ಹಲವರು ಆಗಮಿಸುತ್ತಿದ್ದರು. ಆಕೆ ಯಾರಿಗೂ ಹೇಳದೆ ಕೇಳದೆ ಆಸ್ಪತ್ರೆಯಿಂದ ತೆರಳುತ್ತಿದ್ದಳು. ಈ ಕುರಿತು ಆಕೆಯ ವಿರುದ್ಧ ದೂರುಗಳನ್ನೂ ನೀಡಲಾಗಿತ್ತು ಎಂದು ಪ್ರಾಧ್ಯಾಪಕರೊಬ್ಬರು ಒಬ್ಬರು ಆರೋಪಿಸಿದ್ದಾರೆ. ಆದರೆ, ಆಕೆ ಉಗ್ರಗಾಮಿ ಎಂಬ ಯಾವುದೇ ಸುಳಿವು ಇರಲಿಲ್ಲ ಎಂದು ತಿಳಿಸಿದ್ದಾರೆ.