ಕೇರಳದಲ್ಲಿ ತಯಾರಿಸಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಮಿಕ್ಸ್ಚರ್, ಚಿಪ್ಸ್‌, ಹಲ್ವಾ, ಮುರುಕು, ಸಿಹಿ ತಿಂಡಿಗಳ 90 ಮಾದರಿಗಳ ಪೈಕಿ 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ.

ಬೆಂಗಳೂರು : ಕೇರಳದಲ್ಲಿ ತಯಾರಿಸಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಮಿಕ್ಸ್ಚರ್, ಚಿಪ್ಸ್‌, ಹಲ್ವಾ, ಮುರುಕು, ಸಿಹಿ ತಿಂಡಿಗಳ 90 ಮಾದರಿಗಳ ಪೈಕಿ 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇರಳದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 31 ಮಾದರಿಗಳಲ್ಲಿ ಅಲ್ಯುರಾ ರೆಡ್, ಕಾರಮೊಸೈನ್‌, ಸನ್ಸೆಟ್‌ ಎಲ್ಲೋ, ಟಾರ್ಟ್ರಾಜೈನ್‌ ಬಣ್ಣಗಳ ಬಳಕೆ ಖಚಿತವಾಗಿದೆ. ಜತೆಗೆ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು. ತಯಾರಿಕಾ ದಿನಾಂಕವನ್ನು ಮುಂಚಿತವಾಗಿ ನಮೂದು ಮಾಡಿರುವುದು, FSSAI ನೋಂದಣಿ/ಪರವಾನಗಿ ಸಂಖ್ಯೆ ಮುದ್ರಿತವಾಗಿಲ್ಲದಿರುವುದು ಸಹ ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ ಬೆಳ್ಳುಳ್ಳಿ ಪರೀಕ್ಷೆ:

ಚೀನಾ ದೇಶದಿಂದ ಸರಬರಾಜು ಆಗುತ್ತಿರುವುದಾಗಿ ಹೇಳಲಾದ ಕೃತಕ/ನಿಷೇಧಿತ ಬೆಳ್ಳುಳ್ಳಿಯ ಕುರಿತು ವಿಶೇಷ ಆಂದೋಲನ ನಡೆಸಿ ರಾಜ್ಯಾದ್ಯಂತ 154 ಬೆಳ್ಳುಳ್ಳಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ.

ಅವುಗಳಲ್ಲಿ 147 ಮಾದರಿಗಳು ಸುರಕ್ಷಿತವಾಗಿದ್ದು, 7 ಮಾದರಿಗಳಲ್ಲಿ ಫಂಗಸ್‌ ಬೆಳೆದಿದ್ದರಿಂದ ಅಸುರಕ್ಷಿತ ಎಂದು ವರದಿ ನೀಡಲಾಗಿದೆ. ಕೃತಕ ಬೆಳ್ಳುಳ್ಳಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಹಿ ತಿಂಡಿ ಮಾರಾಟವಾದ ಹಿನ್ನೆಲೆಯಲ್ಲಿ 151 ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 143 ಮಾದರಿ ಸುರಕ್ಷಿತವಾಗಿದ್ದು 9 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡುಬಂದಿದೆ.

ರಾಜ್ಯಾದ್ಯಂತ ಗೋಲ್‌ಗಪ್ಪಾ ಮಾದರಿಗಳ ಪರೀಕ್ಷೆ

ಹೊರ ರಾಜ್ಯಗಳಲ್ಲಿ ಗೋಲ್‌ ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಬಳಸುತ್ತಿರುವ ಬಗ್ಗೆ ಆರೋಪಗಳು ಬಂದಿವೆ. ಜತೆಗೆ ಗೋಲ್‌ಗಪ್ಪಾ ಹಿಟ್ಟನ್ನು ಕಾಲಿನಲ್ಲಿ ತುಳಿದು ತಯಾರಿಸುತ್ತಿರುವ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯಾದ್ಯಂತ ಗೋಲ್‌ ಗಪ್ಪಾಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯವು ಪುಗತಿಯಲ್ಲಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ತಿಳಿಸಿದ್ದಾರೆ.