ವಿವಾದಿತ ಭೋಜಶಾಲಾ ದೇಗುಲ, ಮಸೀದಿ ಸಮೀಕ್ಷೆ ಶುರು

| Published : Mar 23 2024, 01:05 AM IST / Updated: Mar 23 2024, 08:53 AM IST

ಸಾರಾಂಶ

ಸಮೀಕ್ಷೆ ಆರಂಭಿಸಿದ ಎಎಸ್‌ಐ, ಇದು ಮಂದಿರವೇ ಮಸೀದಿಯೇ ಎಂಬುದು ವಿವಾದವಾಗಿರುವ ಕುರಿತು ವೈಜ್ಞಾನಿಕ ಮಾಹಿತಿಯನ್ನು ಒದಗಿಸಲಿದೆ. ಈ ಕುರಿತು ಮಾ.11ರಂದು ಸರ್ವೆಗೆ ಆದೇಶ ನೀಡಿದ್ದ ಮ.ಪ್ರ. ಹೈಕೋರ್ಟ್‌, ಆರು ವಾರಗಳೊಳಗೆ ಸಮೀಕ್ಷೆ ಮುಗಿಸಬೇಕೆಂದು ತಿಳಿಸಿತ್ತು.

ಧಾರ್‌(ಮ.ಪ್ರ.): ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ ವಿವಾದಿತ 11ನೇ ಶತಮಾನದ ಭೋಜ್‌ಶಾಲಾ ದೇಗುಲ ಮತ್ತು ಮಸೀದಿ ಪ್ರಾಂಗಣದ ಸರ್ವೇಕ್ಷಣೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಭಾರೀ ಬಿಗಿ ಭದ್ರತೆಯಲ್ಲಿ ಶುಕ್ರವಾರ ಆರಂಭಿಸಿದೆ. 

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮನೋಜ್‌ ಕುಮಾರ್‌ ಸಿಂಗ್‌, ‘ಎಎಸ್‌ಐನ ತಂಡ ಪ್ರಾಂಗಣದ ಸರ್ವೇಕ್ಷಣೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಆರಂಭಿಸಿದ್ದು, ಅವರಿಗೆ ಅಗತ್ಯವಿರುವ ಎಲ್ಲ ಪರಿಕರ ಮತ್ತು ಸಹಕಾರವನ್ನು ಸ್ಥಳೀಯ ಜಿಲ್ಲಾಡಳಿತದ ವತಿಯಿಂದ ನೀಡಿದ್ದೇವೆ’ ಎಂದು ತಿಳಿಸಿದರು. 

ಏನಿದು ವಿವಾದ?
ಭೋಜ್‌ಶಾಲಾ ಪ್ರಾಂಗಣದಲ್ಲಿ ಹಿಂದೂಗಳು ಮಧ್ಯಕಾಲೀನ ಯುಗದ ಕೆತ್ತನೆಯಿರುವ ವಾಗ್ದೇವಿ(ಸರಸ್ವತಿ) ಗುಡಿಯಿದೆ ಎಂದು ವಾದಿಸುತ್ತಿದ್ದರೆ ಮುಸಲ್ಮಾನರು ಆ ಜಾಗದಲ್ಲಿ ಕಮಲ್‌ ಮೌಲಾ ಮಸೀದಿಯಿದೆ ಎಂದು ವಾದಿಸುತ್ತಿದ್ದಾರೆ. 

ಪ್ರಸ್ತುತ ಪ್ರತಿ ಮಂಗಳವಾರದಂದು ಹಿಂದೂಗಳು ಪೂಜಿಸುತ್ತಿದ್ದರೆ, ಪ್ರತಿ ಶುಕ್ರವಾರಗಳಂದು ಮುಸಲ್ಮಾನರು ಪ್ರಾರ್ಥಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಮೂಲ ಕಟ್ಟಡವನ್ನು ಪತ್ತೆ ಮಾಡಲು ಈ ಜಾಗವನ್ನು 6 ವಾರಗಳೊಳಗೆ ಸರ್ವೇಕ್ಷಣೆ ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್‌ ಎಎಸ್‌ಐಗೆ ಮಾ.11ರಂದು ಆದೇಶಿಸಿತ್ತು.