ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪದೇ ಪದೇ ಪ್ರಧಾನಿ ಹುದ್ದೆ ಆಫರ್? : ಮತ್ತೆ 'ರಾಜಕೀಯ ಬಾಂಬ್'

| Published : Sep 28 2024, 01:17 AM IST / Updated: Sep 28 2024, 05:23 AM IST

ಸಾರಾಂಶ

ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಹುದ್ದೆಗೆ ಆಫರ್ ಬಂದಿತ್ತು ಎಂಬ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈಗ ಮತ್ತೊಂದು 'ರಾಜಕೀಯ ಬಾಂಬ್' ಸಿಡಿಸಿದ್ದಾರೆ. ಒಂದಲ್ಲ, ಹಲವು ಬಾರಿ ಈ ಆಫರ್ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಮುಂಬೈ: ಕಳೆದ ಲೋಕಸಭೆ ಚುನಾವಣೆ ಬಳಿಕ ಪ್ರತಿಪಕ್ಷದ ನಾಯಕರೊಬ್ಬರಿಂದ ತಮಗೆ ಪ್ರಧಾನಿಯಾಗಲು ಆಫರ್‌ ಬಂದಿತ್ತು ಎಂದು ಹೇಳುವ ಮೂಲಕ ‘ರಾಜಕೀಯ ಬಾಂಬ್‌’ ಸಿಡಿಸಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಇದೀಗ ‘ನನಗೆ ಒಂದಲ್ಲ, ಹಲವು ಬಾರಿ ಈ ಆಫರ್‌ ಬಂದಿತ್ತು’ ಎಂದು ಹೇಳಿ ಪುನಃ ಸಂಚಲನ ಮೂಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಸಂವಾದದ ವೇಳೆ ಗಡ್ಕರಿ ಬಳಿ ಪ್ರೇಕ್ಷಕರೊಬ್ಬರು, ‘ಜೂನ್‌ನಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಪ್ರಧಾನಿಯಾಗಲು ಆಫರ್‌ ಬಂದಿತ್ತು ಎಂದಿದ್ದೀರಿ. ಅದರ ಬಗ್ಗೆ ವಿವರ ನೀಡುತ್ತೀರಾ’ ಎಂದು ಕೇಳಿದರು.

ಅದಕ್ಕೆ ಉತ್ತರಿಸಿದ ಗಡ್ಕರಿ, ‘ಲೋಕಸಭೆ ಚುನಾವಣೆಗೂ ಮುನ್ನ ಹಾಗೂ ನಂತರ ನನಗೆ ಪ್ರಧಾನಿಯಾಗಲು ಅನೇಕ ಬಾರಿ ಆಫರ್‌ ಬಂದಿತ್ತು. ಹೆಚ್ಚಿನ ಮಾಹಿತಿ ಬೇಕಿದ್ದರೆ ಪತ್ರಕರ್ತರು ಸಂಗ್ರಹಿಸಲಿ. ನಾನು ನನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿಯಾಗುವ ಆಫರ್‌ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಪ್ರಧಾನಿಯಾಗುವುದು ನನ್ನ ಗುರಿಯಲ್ಲ. ನಾನು ನನ್ನ ಸಿದ್ಧಾಂತ ಮತ್ತು ಬದ್ಧತೆಗಾಗಿ ರಾಜಕಾರಣದಲ್ಲಿದ್ದೇನೆ’ ಎಂದು ಹೇಳಿದರು.

ಇಂದಿನದು ಬರೀ ಪವರ್ ಪೊಲಿಟಿಕ್ಸ್‌:

ಈ ನಡುವೆ ಶುಕ್ರವಾರ ಇನ್ನೊಂದು ಸಮಾಂಭದಲ್ಲಿ ಮಾತನಾಡಿದ ಗಡ್ಕರಿ, ಅಂದು ರಾಜಕೀಯ ಎಂದರೆ ಅದು ದೇಶ ಕಟ್ಟುವ, ಅಭಿವೃದ್ಧಿಯ ಹಾಗೂ ಸಮಾಜ ಸೇವೆ ಉದ್ದೇಶ ಹೊಂದಿತ್ತು. ಇಂದಿನದು ಕೇವಲ ಅಧಿಕಾರ ರಾಜಕೀಯ (ಪವರ್‌ ಪೊಲಿಟಿಕ್ಸ್) ಎಂದರು.