ಅಮೆರಿಕದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿದ್ದ ಜನರ ಮೇಲೆ ಏಕಾಏಕಿ ಯಮಸ್ವರೂಪಿ ಪಿಕಪ್‌ ಟ್ರಕ್‌ ನುಗ್ಗಿಸಿದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 15ಕ್ಕೆ ಏರಿಕೆಯಾಗಿದೆ. ದಾಳಿಯಲ್ಲಿ ಗಾಯಗೊಂಡಿದ್ದ 30 ಜನರ ಪೈಕಿ ಇನ್ನೂ 5 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ನ್ಯೂ ಓರ್ಲಿನ್ಸ್‌: ಅಮೆರಿಕದಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿದ್ದ ಜನರ ಮೇಲೆ ಏಕಾಏಕಿ ಯಮಸ್ವರೂಪಿ ಪಿಕಪ್‌ ಟ್ರಕ್‌ ನುಗ್ಗಿಸಿದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 15ಕ್ಕೆ ಏರಿಕೆಯಾಗಿದೆ. ದಾಳಿಯಲ್ಲಿ ಗಾಯಗೊಂಡಿದ್ದ 30 ಜನರ ಪೈಕಿ ಇನ್ನೂ 5 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಉಗ್ರರ ನಂಟು?: ಅತ್ತ ಪ್ರಕರಣದ ತನಿಖೆ ನಡೆಸುತ್ತಿರುವ ಎಫ್‌ಬಿಐ, ಮೃತ ಆರೋಪಿಯನ್ನು ಟೆಕ್ಸಾಸ್‌ ನಿವಾಸಿ ಶಂಸುದ್ದೀನ್‌ ಜಬ್ಬಾರ್(42) ಎಂದು ಗುರುತಿಸಿದೆ. ಈ ಕೃತ್ಯವನ್ನು ಆರೋಪಿಯೊಬ್ಬನೇ ನಡೆಸಿದ್ದಲ್ಲ ಎಂಬ ಶಂಕೆ ವ್ಯಕ್ತವಾಗಿದ್ದು, ಈತ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಬಗ್ಗೆ ತನಿಖೆ ನಡೆದಿದೆ. ಇದಕ್ಕೆ ಪೂರಕವಾಗಿ ದಾಳಿಗೆ ಬಳಸಿದ ಟ್ರಕ್‌ ಮೇಲೆ ಐಸಿಸ್‌ ಉಗ್ರ ಸಂಘಟನೆಯ ಧ್ವಜವಿರುವುದು ಪತ್ತೆಯಾಗಿದೆ.

ಘಟನಾಸ್ಥಳದಲ್ಲಿ ಕೂಲರ್‌ಗಳಲ್ಲಿ ಅಳವಡಿಸಲಾಗಿದ್ದ 2 ಪೈಪ್‌ ಬಾಂಬ್‌ ಸೇರಿದಂತೆ ಹಲವು ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ. ಇದನ್ನು 3 ಪುರುಷರು ಹಾಗೂ ಓರ್ವ ಮಹಿಳೆ ಜೋಡಿಸುತ್ತಿರುವ ದೃಶ್ಯ ಸೆರೆಯಾಗಿದೆಯಾದರೂ, ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ಸ್ಪಷ್ಟತೆಯಿಲ್ಲ.

ಬೈಡೆನ್‌ ಆಕ್ರೋಶ: ದಾಳಿಯನ್ನು ತುಚ್ಛ ಹಾಗೂ ಹೀನ ಕೃತ್ಯವೆಂದು ಕರೆದಿರುವ ಅಧ್ಯಕ್ಷ ಬೈಡನ್‌, ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಜತೆಗೆ, ‘ಹಿಂಸೆಗೆ ಸಮರ್ಥನೆಯಿಲ್ಲ. ದೇಶವಾಸಿಗಳ ಮೇಲಿನ ದಾಳಿಗಳನ್ನು ನಾವು ಸಹಿಸುವುದಿಲ್ಲ’ ಎಂದು ಗುಡುಗಿದರು. ಕೃತ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಆರೋಪಿ ಜಬ್ಬಾರ್‌, ತಾನು ಐಸಿಸ್‌ನಿಂದ ಪ್ರಭಾವಿತನಾಗಿ ಜನರನ್ನು ಕೊಲ್ಲಲು ಬಯಸಿರುವುದಾಗಿ ಹೇಳಿಕೊಂಡಿರುವುದನ್ನು ಎಫ್‌ಬಿಐ ಪತ್ತೆ ಹಚ್ಚಿರುವುದಾಗಿ ಬೈಡನ್‌ ಹೇಳಿದ್ದಾರೆ.

ಸೇನೆಯಲ್ಲಿದ್ದ ಆರೋಪಿ: 2007ರಲ್ಲಿ ಅಮೆರಿಕ ಸೇನೆ ಸೇರಿದ್ದ ಜಬ್ಬಾರ್‌ ಮಾನವ ಸಂಪನ್ಮೂಲ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈತನ್ನನು 2009ರಿಂದ 2010ರ ತನಕ ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿತ್ತು. ನಂತರ 2025ರಲ್ಲಿ ರಿಸರ್ವ್‌ ಪಡೆಗೆ ಸೇರಿಸಲಾಗಿದ್ದು, 2020ರಲ್ಲಿ ಸ್ಟಾಫ್‌ ಸಾರ್ಗೆಂಟ್‌ ಹುದ್ದೆಯಿಂದ ನಿವೃತ್ತನಾಗಿದ್ದ.

ನೈಟ್ ಕ್ಲಬ್‌ ಮೇಲೆ ಗುಂಡಿನ ದಾಳಿ

ನ್ಯೂಯಾರ್ಕ್‌: ಹೊಸ ವರ್ಷದ ಮೊದಲ ದಿನವೇ ನ್ಯೂಯಾರ್ಕ್‌ನ ಕ್ವೀನ್ಸ್‌ ರಸ್ತೆಯಲ್ಲಿರುವ ನೈಟ್‌ಕ್ಲಬ್‌ವೊಂದರ ಹೊರಗಡೆ ನಾಲ್ವರು ಪುರುಷರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಜನರು ಗಾಯಗೊಂಡಿದ್ದಾರೆ.

ನ್ಯೂಯಾರ್ಕ್‌ ಸಿಟಿಯ ಜಮೈಕಾದ ಅಮಝುರಾ ನೈಟ್‌ಕ್ಲಬ್‌ನಲ್ಲಿ ಬುಧವಾರ ರಾತ್ರಿ ದುರಂತ ಸಂಭವಿಸಿದ್ದು, 4 ಮಂದಿ ಪುರುಷರು ಏಕಾಏಕಿ 30 ಸಲ ಜನರ ಗುಂಪಿನ ನಡುವೆ ಗುಂಡು ಹಾರಿಸಿದ್ದಾರೆ. ಈ ವೇಳೆ ಕನಿಷ್ಟ 10 ಮಂದಿಗೆ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ನಾಲ್ವರು ಗುಂಡು ಹಾರಿಸುತ್ತಿರುವ ದೃಶ್ಯ ಕ್ಲಬ್‌ನ ಸಿಸಿಟೀವಿಯಲ್ಲಿ ಸೆರೆಯಾಗಿದೆ.