ಸಾರಾಂಶ
ಕಳೆದ ದಶಕದಲ್ಲಿ ಆಂತರಿಕ ಸಂಘರ್ಷಕ್ಕೆ ತುತ್ತಾಗಿ 50 ಸಾವಿರ ಜನರ ಮಾರಣಹೋಮ ನಡೆದಿದ್ದ ಮಧ್ಯಪ್ರಾಚ್ಯ ದೇಶ ಸಿರಿಯಾದಲ್ಲಿ ಈಗ ಮತ್ತೆ ಆಂತರಿಕ ಸಂಘರ್ಷ ಆರಂಭವಾಗಿದೆ.
ಡಮಾಸ್ಕಸ್: ಕಳೆದ ದಶಕದಲ್ಲಿ ಆಂತರಿಕ ಸಂಘರ್ಷಕ್ಕೆ ತುತ್ತಾಗಿ 50 ಸಾವಿರ ಜನರ ಮಾರಣಹೋಮ ನಡೆದಿದ್ದ ಮಧ್ಯಪ್ರಾಚ್ಯ ದೇಶ ಸಿರಿಯಾದಲ್ಲಿ ಈಗ ಮತ್ತೆ ಆಂತರಿಕ ಸಂಘರ್ಷ ಆರಂಭವಾಗಿದೆ. ಅಲ್ ಖೈದಾ ಬೆಂಬಲಿತ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಉಗ್ರ ಸಂಘಟನೆಯ ಸಿರಿಯನ್ ಬಂಡುಕೋರರು, ಕೇವಲ 1 ವಾರದಲ್ಲಿ 4 ನಗರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ಇನ್ನು ರಾಜಧಾನಿ ಡಮಾಸ್ಕಸ್ ಸನಿಹ ಬಂದಿರುವ ಉಗ್ರರು ಅದನ್ನು ಸುತ್ತುವರಿಯುತ್ತಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಅಧ್ಯಕ್ಷ ಬಷರ್ ಅಲ್ ಅಸಾದ್‌ಗೆ ಪದಚ್ಯುತಿ ಭೀತಿ ಆರಂಭವಾಗಿದೆ.
ಆದರೆ ಅಸಾದ್ ಸರ್ಕಾರವೇನೂ ಸುಮ್ಮನೇ ಕೂತಿಲ್ಲ. ಅಸಾದ್ ಆಡಳಿತಕ್ಕೆ ರಷ್ಯಾ ಬೆಂಬಲವಾಗಿ ನಿಂತಿದ್ದು, ರಷ್ಯಾ ಹಾಗೂ ಸಿರಿಯನ್ ಪಡೆಗಳು ಉಗ್ರರ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುತ್ತಿವೆ. ಹಮಾ, ಇಡ್ಲಿಬ್ ಮತ್ತು ಅಲೆಪ್ಪೊದಾದ್ಯಂತ ನೂರಾರು ಬಂಡುಕೋರರನ್ನು ವಾಯುದಾಳಿಯಲ್ಲಿ ಅವು ಸಾಯಿಸಿವೆ ಎಂದು ವರದಿಯಾಗಿದೆ. ಇದು ಸಂಘರ್ಷವನ್ನು ಮತ್ತಷ್ಟು ತಾರಕಕ್ಕೇರಿಸುವ ಸುಳಿವು ನೀಡಿದೆ. ಆದಾಗ್ಯೂ ಉಗ್ರರ ದಾಳಿಗೆ ಹೋಲಿಸಿದರೆ ಈ ಪ್ರತಿದಾಳಿ ದುರ್ಬಲವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.1 ವಾರದಲ್ಲಿ 4 ನಗರ ವಶ:
2011ರಲ್ಲಿ ಅಧ್ಯಕ್ಷ ಬಶರ್ ಅಲ್-ಅಸಾದ್ ವಿರುದ್ಧದ ದಂಗೆಯ ಹುಟ್ಟೂರು ಎನ್ನಿಸಿಕೊಂಡಿದ್ದ ದಾರಾವನ್ನು ಶನಿವಾರ ಸಿರಿಯನ್ ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮುನ್ನ ಕೇವಲ ಒಂದು ವಾರದಲ್ಲಿ ಅಲೆಪ್ಪೋ, ಹಾಮಾ ಹಾಗೂ ಹೋಮ್ಸ್ 3 ನಗರಗಳನ್ನು ಬಂಡುಕೋರರು ವಶಕ್ಕೆ ತೆಗೆದುಕೊಂಡಿದ್ದರು. ದಾರಾ ಪತನವು ಸರ್ಕಾರದ ನಿಯಂತ್ರಣದಿಂದ ಜಾರಿದ 4ನೇ ಪ್ರಮುಖ ನಗರವಾಗಿದೆ.ಡಮಾಸ್ಕಸ್ ಸುತ್ತ ಉಗ್ರರು?:
ಇನ್ನು ಹಾಮಾ ನಗರ ಅಸಾದ್ ಅವರ ಕೇಂದ್ರಸ್ಥಳವಾದ ರಾಜಧಾನಿ ಡಮಾಸ್ಕಸ್‌ನಿಂದ ಕೇವಲ 100 ಕಿ.ಮೀ. ದೂರದಲ್ಲಿದೆ. ಹೀಗಾಗಿ ಡಮಾಸ್ಕಸ್ ಸನಿಹ ಬಂದಿರುವ ಉಗ್ರರು ಅದನ್ನು ಸುತ್ತುವರಿಯುತ್ತಿದ್ದಾರೆ. ಅಸಾದ್ ಬುಡವೂ ಅಲ್ಲಾಡತೊಡಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದೇ ವೇಳೆ, ಇರಾನ್ ಈವರೆಗೆ ಅಸಾದ್ ಬೆಂಬಲಕ್ಕೆ ನಿಂತಿತ್ತು. ಆದರೆ ಇತ್ತೀಚಿನ ಮಧ್ಯಪ್ರಾಚ್ಯ ಸ್ಥಿತ್ಯಂತರದ ಕಾರಣ ತನ್ನ ಪಡೆಗಳನ್ನು ಸಿರಿಯಾದಿಂದ ವಾಪಸ್ ಕರೆಸಿಕೊಂಡಿದೆ. ಇದು ಅಸಾದ್‌ಗೆ ನಡುಕ ಹುಟ್ಟುಹಾಕಿದೆ.
ಈಗಾಗಲೇ ಉಗ್ರರ ದಾಳಿಗೆ ಬೆಚ್ಚಿ ಅಸಾದ್ ನಿಷ್ಠ ಸೇನೆಯೂ ಇಲ್ಲಿಂದ ನಿರ್ಗಮಿಸಲು ಒಪ್ಪಿಕೊಂಡಿದೆ ಎಂದು ಉಗ್ರರ ಹೇಳಿಕೆ ತಿಳಿಸಿದೆ. ಉಗ್ರರ ದಾಳಿಗೆ ಬೆಚ್ಚಿ ಲಕ್ಷಾಂತರ ಜನರು ದಂಗೆ ಸ್ಥಳಗಳಿಂದ, ಸರ್ಕಾರದ ಹಿಡಿತದಲ್ಲಿರು ಲಟಾಕಿಯಾ ಮತ್ತು ಟಾರ್ಟಸ್‌ಗೆ ಪಲಾಯನ ಮಾಡುತ್ತಿದ್ದಾರೆ. ಈ ನಡುವೆ ಸಿರಿಯಾ ಜತೆಗಿನ ಗಡಿಯನ್ನು ಜೋರ್ವಾನ್ ಬಂದ್ ಮಾಡಿದೆ. ಇನ್ನೊಂದೆಡೆ ಲೆಬನಾನ್, ಸಿರಯನ್ನರು ಗಡಿ ದಾಟುವ ವಿರುದ್ಧ ಕೆಲವು ನಿರ್ಬಂಧ ಹೇರಿದೆ.
ಅಸಾದ್ ವಿರೋಧಿಗಳ ಸಂಭ್ರಮ:
ಬಂಡುಕೋರರ ಪಡೆಗಳು ಮುನ್ನಡೆ ಸಾಧಿಸುತ್ತಿದ್ದಂತೆಯೇ ಅಸಾದ್ ಬೆಂಬಲಿಗರು ಸಿರಿಯಾದ ವಿವಿಧ ನಗರಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಅಸಾದ್ ವಿರುದ್ಧ ಅಲ್ ಖೈದಾ ಬೆಂಬಲಿತರ ಸಮರ
ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ಅವರ ವಿರುದ್ಧ ಸಮರ ಸಾರಿರುವುದು ಹಯಾತ್ ತಹ್ರೀರ್ ಅಲ್-ಶಾಮ್ (ಎಚ್‌ಟಿಎಸ್) ಎಂಬ ಉಗ್ರ ಸಂಘಟನೆ. ಈ ಗುಂಪು ಅಲ್-ಖೈದಾದಲ್ಲಿ ಬೆಂಬಲಿತ ಸಂಘಟನೆಯಾಗಿದೆ ಹೊಂದಿದೆ ಮತ್ತು ಪಾಶ್ಚಿಮಾತ್ಯ ಸರ್ಕಾರಗಳಿಂದ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿತವಾಗಿದೆ. ಇತ್ತೀಚೆಗೆ ರಷ್ಯಾ ಅಸಾದ್‌ಗೆ ಬೆಂಬಲವಾಗಿ ನಿಂತು ಉಗ್ರರ ಮೇಲೆ ದಾಳಿ ಮಾಡಲು ಆರಂಭಿಸಿದ್ದರಿಂದ ಉಗ್ರರೂ ವ್ಯಗ್ರರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ತಣ್ಣಗಿದ್ದ ಉಗ್ರರು ಪ್ರತಿದಾಳಿ ಆರಂಭಿಸಿದ್ದಾರೆ. ಎಚ್‌ಟಿಎಸ್ ನಾಯಕ ಅಬು ಮೊಹಮ್ಮದ್ ಅಲ್-ಜೋಲಾನಿ ಸಂದರ್ಶನವೊಂದರಲ್ಲಿ ಮಾತನಾಡಿ, ‘ಅಸಾದ್‌ನನ್ನು ಪದಚ್ಯುತಗೊಳಿಸುವುದು ನಮ್ಮ ಮುಖ್ಯ ಗುರಿ. ಈ ಮಿಂಚಿನ ಆಕ್ರಮಣ ಮಹತ್ವದ ತಿರುವು’ ಎಂದಿದ್ದಾನೆ.
ಮಧ್ಯಪ್ರಾಚ್ಯ ತತ್ತರ
ಈಗಾಗಲೇ ಹಮಾಸ್-ಇಸ್ರೇಲ್, ಹಿಜ್ಬುಲ್ಲಾ-ಇರಾನ್-ಇಸ್ರೇಲ್ ಯುದ್ಧದಿಂದ ಮಧ್ಯಪ್ರಾಚ್ಯ ತತ್ತರಿಸುತ್ತಿದೆ. ಅಂಥದ್ದರಲ್ಲಿ ಸಿರಿಯಾ ಅಂತರ್ಯುದ್ಧವು ಮಧ್ಯಪ್ರಾಚ್ಯದಲ್ಲಿನ ಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.
ಸಿರಿಯಾಗೆ ಹೋಗಬೇಡಿ: ಭಾರತೀಯರಿಗೆ ಎಚ್ಚರಿಕೆ
ನವದೆಹಲಿ : ಇಸ್ಲಾಮಿಕ್ ಬಂಡುಕೋರರು ಸಿರಿಯಾದಲ್ಲಿ ಹಲವು ನಗರಗಳನ್ನು ವಶಪಡಿಸಿಕೊಳ್ಳುತ್ತಿರುವ ಕಾರಣ ಅಲ್ಲಿಗೆ ಪ್ರಯಾಣಿಸಬೇಡಿ ಎಂದು ಭಾರತವು ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಒಂದು ವೇಳೆ ಈಗಾಗಲೇ ಅಲ್ಲಿ ಭಾರತೀಯರು ಇದ್ದರೆ ಎಚ್ಚರ ವಹಿಸಬೇಕು ಹಾಗೂ ಹೊರಗಿನ ಸುತ್ತಾಟಕ್ಕೆ ಕಡಿವಾಣ ಹಾಕಬೇಕು ಎಂದು ಸೂಚಿಸಿದೆ. ಶನಿವಾರ ವಿದೇಶಾಂಗ ಸಚಿವಾಲಯ ಸಲಹಾವಳಿ ಹೊರಡಿಸಿದ್ದು, ‘ಹಿಂಸಾಪೀಡಿತ ದೇಶದಲ್ಲಿ ವಾಸಿಸುವ ಭಾರತೀಯರು ಸಾಧ್ಯವಾದರೆ ಲಭ್ಯವಿರುವ ವಿಮಾನಗಳ ಮೂಲಕ ಭಾರತಕ್ಕೆ ವಾಪಸು ಬರಬೇಕು’ ಎಂದು ಕೋರಿದೆ.
‘ಏನಾದರೂ ತುರ್ತು ಇದ್ದರೆ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ) ಸಂಪರ್ಕಿಸಬೇಕು ಮತ್ತು ಇಮೇಲ್ ಐಡಿ hoc.damascus@mea.gov.in ಮೂಲಕವೂ ಸಹಾಯ ಕೋರಬಬುದು’ ಎಂದು ವಿನಂತಿಸಲಾಗಿದೆ.’ಸಿರಿಯಾದಲ್ಲಿ ಸುಮಾರು 90 ಭಾರತೀಯರಿದ್ದಾರೆ, ಇದರಲ್ಲಿ 14 ಮಂದಿ ವಿವಿಧ ಅಮೆರಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ನಮ್ಮ ಮಿಷನ್ ನಮ್ಮ ಪ್ರಜೆಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ’ ಎಂದು ಸಚಿವಾಲಯ ತಿಳಿಸಿದೆ.