ಸಾರಾಂಶ
ಅಸ್ಸಾಂನ ಜಾಗಿರೋಡ್‌ನಲ್ಲಿ 27 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೆಮಿಕಂಡಕ್ಟರ್ ಘಟಕ ರಾಜಕೀಯ ಪ್ರಭಾವದಿಂದ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂನಲ್ಲಿ ಬಿಜೆಪಿ ಶಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಮೊರಿಗಾಂವ್: ಅಸ್ಸಾಂನ ಜಾಗಿರೋಡ್‌ನಲ್ಲಿ 27 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೆಮಿಕಂಡಕ್ಟರ್ ಘಟಕ ರಾಜಕೀಯ ಪ್ರಭಾವದಿಂದ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂನಲ್ಲಿ ಬಿಜೆಪಿ ಶಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಗಿರೋಡ್ ಶಾಸಕ, ಸಚಿವ ಪಿಜುಷ್ ಹಜಾರಿಕಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ‘ಕಾಂಗ್ರೆಸ್‌ಗೆ ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕವಾಗುತ್ತಿರುವುದು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರ ಅಧಿಕಾರದಲ್ಲಿ ಆಗದಿರುವುದು ಈಗ ಆಗುತ್ತಿದೆ ಎಂದು ಅವರು ಅಸೂಯೆ ಪಟ್ಟುಕೊಳ್ಳುತ್ತಿದ್ದಾರೆ’ ಎಂದು ಹಜಾರಿಕಾ ಇದೇ ವೇಳೆ ಹೇಳಿದರು.‘ಸೆಮಿ ಕಂಡಕ್ಟರ್ ಉತ್ಪಾದನೆಗೆ ಬೇಕಾದ ಶೇ.70ರಷ್ಟು ಪ್ರತಿಭೆಗಳು ಕರ್ನಾಟಕದಲ್ಲಿವೆ. ಆದರೆ, ದೇಶದ ಐದು ನೂತನ ಸೆಮಿ ಕಂಡಕ್ಟರ್ ಘಟಕಗಳ ಪೈಕಿ ನಾಲ್ಕನ್ನು ಗುಜರಾತ್‌ಗೆ ಹಾಗೂ ಒಂದನ್ನು ಅಸ್ಸಾಂಗೆ ಕೇಂದ್ರ ಸರ್ಕಾರ ನೀಡಿದೆ. ಅಲ್ಲಿ ಯಾವುದೇ ಕೌಶಲ್ಯ ಹಾಗೂ ಸಂಶೋಧನಾ ವಾತಾವರಣ ಇಲ್ಲ’ ಎಂದು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದರು.