ಸಾರಾಂಶ
ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದು ಇರಾನ್ ಮೇಲೆ ಇಸ್ರೇಲ್ ನಡೆಸಿದ ಮೊದಲ ಅಧಿಕೃತ ದಾಳಿ.
ಟೆಲ್ ಅವಿವ್: ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದು ಇರಾನ್ ಮೇಲೆ ಇಸ್ರೇಲ್ ನಡೆಸಿದ ಮೊದಲ ಅಧಿಕೃತ ದಾಳಿ. ಆದರೆ ಇದಕ್ಕೂ ಮೊದಲು ಇರಾನ್ ಗುರಿಯಾಗಿಸಿ ಇಸ್ರೇಲ್ ಹಲವು ದಾಳಿ ನಡೆಸಿ ಹಲವು ‘ಉಗ್ರ’ ನಾಯಕರನ್ನು ಬಲಿ ಪಡೆದಿದೆ. ಆದರೆ ಇವೆಲ್ಲವೂ ರಹಸ್ಯ ದಾಳಿಗಳು. ಹೀಗಾಗಿ ದಾಳಿಗೊಳಗಾದ ಇರಾನ್ ಕೂಡಾ ನೇರವಾಗಿ ಇಸ್ರೇಲ್ ಮೇಲೆ ಆರೋಪ ಹೊರಿಸಲು ಆಗಿರಲಿಲ್ಲ, ಇಸ್ರೇಲ್ ಕೂಡಾ ದಾಳಿ ಹೊತ್ತುಕೊಂಡಿರಲಿಲ್ಲ.
ಹಿಂದಿನ ದಾಳಿಗಳು.
1. ರೆವಲ್ಯೂಷನರಿ ಗಾರ್ಡ್ ಅಥವಾ ಇರಾನ್ ಸೇನೆ ಮೊದಲಿನಿಂದಲೂ ಇಸ್ರೇಲಿಗಳ ಗುರಿಯಾಗಿತ್ತು. ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆನನ್ನು ಜು.31ರಂದು ಇಸ್ರೇಲ್ ವಾಯುದಾಳಿ ಮಾಡಿ ಹತ್ಯೆ ಮಾಡಿತ್ತು. ಬಳಿಕ ಸೆ.27ರಂದು ಲೆಬನಾನ್‌ನ ಬೈರೂತ್‌ನಲ್ಲಿ ಹೆಜ್ಬುಲ್ಲಾ ಉಗ್ರ ನಾಯಕ ಹಸನ್ ನಸ್ರಲ್ಲಾ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಇರಾನ್‌ನ ಸೇನಾ ನಾಯಕನೊಬ್ಬ ಕೂಡ ಹತನಾಗಿದ್ದ.
2. ಕಳೆದ ಏ.1ರಂದು ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿಗೆ ಹೊಂದಿಕೊಂಡ ಕಟ್ಟದ ಮೇಲೆ ನಡೆದ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಹಲವು ನಾಯಕರ ಹತ್ಯೆ.
3. 2022 ಮತ್ತು 2023ರಲ್ಲಿ ಸಿರಿಯಾದ ಮೇಲೆ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಇಬ್ಬರು ಕಮಾಂಡರ್‌ಗಳ ಸಾವು.
4. 2022ರ ಮೇ ತಿಂಗಳಲ್ಲಿ ಇರಾನ್ ಕ್ವಾಡ್ ಪೋರ್ಸ್ ನಾಯಕ ಸಯ್ಯದ್ ಖೋಡೇಯಿನನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಗಂತಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಇದರ ಹಿಂದೆ ತನ್ನ ಕೈವಾಡವಿದೆ ಎಂದು ಇಸ್ರೇಲ್ ಅಮೆರಿಕಕ್ಕೆ ರಹಸ್ಯ ಮಾಹಿತಿ ನೀಡಿತ್ತಂತೆ.
5. 2011ರಲ್ಲಿ ಟೆಹ್ರಾನ್ ಸಮೀಪವೇ, ಇರಾನ್ ಶಸ್ತ್ರಾಸ್ತ್ರ ಯೋಜನೆಯ ರೂವಾರಿ ಹಸ್ಸನ್ ಮೊಘದಂನನ್ನು ಹತ್ಯೆ ಮಾಡಲಾಗಿತ್ತು. ಇದರ ಹಿಂದೆ ಅಮೆರಿಕ ಮತ್ತು ಇಸ್ರೇಲ್‌ನ ಕೈವಾಡದ ಶಂಕೆ ವ್ಯಕ್ತವಾಗಿತ್ತು.
6. 2020ರಲ್ಲಿ ಇರಾನ್‌ನ ಪರಮಾಣು ಯೋಜನೆ ರೂವಾರಿ, ವಿಜ್ಙಾನಿ ಮೊಹ್ಸೇನ್ ಫಖ್ರಿಝಾದೇಹ್‌ನನ್ನು ಹತ್ಯೆ ಮಾಡಲಾಗಿತ್ತು. ಅದರ ಹಿಂದೆಯೂ ಇಸ್ರೇಲ್ ಕೈವಾಡದ ಶಂಕೆ ವ್ಯಕ್ತವಾಗಿತ್ತು.
7. ಕಳೆದ ಕೆಲ ವರ್ಷಗಳಲ್ಲಿ ಇರಾನ್ ಪರಮಾಣು ಯೋಜನೆಗಳಲ್ಲಿ ನಿರತರಾಗಿದ್ದ ವಿಜ್ಞಾನಿಗಳಾದ ಮೊಸ್ತಫಾ ಅಹಮದಿ ರೋಶನ್, ಮಾಜಿದ್ ಶಾಹ್ರಿರಿ, ಮಸ್ಸೌದ್ ಅಲಿ ಮೊಹಮ್ಮದಿ ಮೊದಲಾದವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಹಿಂದೆಯೂ ಇಸ್ರೇಲ್ ಕೈವಾಡವನ್ನು ಶಂಕಿಸಲಾಗಿತ್ತು.
8. 2021ರಲ್ಲಿ ಇರಾನ್ ನಟಾನ್ಜ ಪರಮಾಣು ಘಟಕದಲ್ಲಿ ಲಘು ಸ್ಫೋಟ ಸಂಭವಿಸಿತ್ತು. ಇದರಲ್ಲಿ ಇಸ್ರೇಲ್ ಕೈವಾಡವಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆರೋಪಿಸಿತ್ತು.
9. 2019ರಲ್ಲಿ ಸಿರಿಯಾದ ಮೂಲಕ ಹಾದು ಹೋಗುವ ಇರಾನಿ ತೈಲ ಪೈಪ್‌ಗಳ ಮೇಲೆ ಸರಣಿ ದಾಳಿ ನಡೆದಿತ್ತು. ಇದರಲ್ಲೂ ಇಸ್ರೇಲ್ ಕೈವಾಡವಿತ್ತು ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಇರಾನ್‌ನಲ್ಲಿ ದುಷ್ಕರ್ಮಿಗಳ ದಾಳಿ: 10 ಪೊಲೀಸರ ಹತ್ಯೆ
ದುಬೈ: ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಪ್ರಕ್ಷುಬ್ಧ ಆಗ್ನೇಯ ಭಾಗದ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ರಾಷ್ಟ್ರೀಯ ಪೊಲೀಸ್ ಪಡೆಯ 10 ಜನ ಮೃತಪಟ್ಟಿದ್ದಾರೆ.ಈ ಕುರಿತು ಇರಾನ್‌ನ ಸುದ್ದಿಸಂಸ್ಥೆಗಳಾದ ಐಎಸ್‌ಎನ್‌ಎ, ಮೆಹ್ರ್ ಹಾಗೂ ತಸ್ನಿಂ ವರದಿ ಮಾಡಿದ್ದು, ರಾಜಧಾನಿ ತೆಹ್ರಾನ್‌ನಿಂದ 1,200 ಕಿಮೀ ದೂರದಲ್ಲಿರುವ ಗೊಹರ್ ಕುಹ್ ಪ್ರಾಂತ್ಯದಲ್ಲಿ ಸಾವು ಸಂಭವಿಸಿರುವುದಾಗಿ ತಿಳಿಸಿವೆ.
ಇರಾನ್ ಮೇಲೆ ಇಸ್ರೇಲ್ ಶನಿವಾರ ಬೆಳಗ್ಗೆ ತೀವ್ರ ದಾಳಿ ನಡೆಸಿರುವ ಹೊತ್ತಿನಲ್ಲೇ ಈ ಘಟನೆ ಸಂಭವಿಸಿದೆ. ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಪತ್ತೆಯಾಗಿಲ್ಲ ಹಾಗೂ ಇದುವರೆಗೆ ಯಾವ ಸಂಘಟನೆಯೂ ಇದರ ಹೊಣೆ ಹೊತ್ತುಕೊಂಡಿಲ್ಲ.
ಇಸ್ರೇಲ್ ಮೇಲೆ ಹಿಜ್ಬುಲ್ಲಾ ಉಗ್ರರ ರಾಕೆಟ್ ದಾಳಿ
ಬೈರೂತ್: ಇರಾನ್ ಮೇಲೆ ಇಸ್ರೇಲ್ ಸರಣಿ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ತಾವು ಇಸ್ರೇಲ್‌ನ ಉತ್ತರ ಭಾಗದಲ್ಲಿರುವ ಗುಪ್ತಚರ ಕೇಂದ್ರದ ಮೇಲೆ ರಾಕೆಟ್ ಹಾಗೂ ಡ್ರೋನ್ ದಾಳಿ ಮಾಡಿದ್ದಾಗಿ ಹೇಳಿದ್ದಾರೆ.ಟೆಲ್ ಅವಿವ್‌ನಿಂದ ದಕ್ಷಿಣ ದಿಕ್ಕಿನಲ್ಲಿರುವ ಸ್ಯಾಫೆಡ್ ಸಿಟಿಯ ಮೈಷರ್ ಬೇಸ್ ಕೇಂದ್ರವನ್ನು ಗುರಿಯಾಗಿಸಿ ಕ್ಷಿಪಣಿ, ಡ್ರೋನ್ ಬಳಸಿ ದಾಳಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಇದು ಹಿಜ್ಬುಲ್ಲಾ ಹೊಣೆ ಹೊತ್ತಿರುವ ಮೊದಲ ದಾಳಿಯಾಗಿದೆ.
ದಾಳಿಗೆ ಇಸ್ರೇಲ್ ಸಿದ್ಧ ಎಂದು ಅಮೆರಿಕ ರಹಸ್ಯ ವರದಿ ಹೇಳಿತ್ತು!
ತೆಹ್ರಾನ್: ‘ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಬಹುದು’ ಎಂದು ಇತ್ತೀಚೆಗೆ ಅಮೆರಿಕ ಗೌಪ್ಯ ವರದಿಗಳಲ್ಲಿ ಉಲ್ಲೇಖಿಸಲಾದ ಸಂಗತಿಗಳು ಮಾಧ್ಯಮಗಳಲ್ಲಿ ಬಯಲಾಗಿದ್ದವು. ಇಸ್ರೇಲ್ ಸೇನೆಯು ಯುದ್ಧ ತಾಲೀಮು ನಡೆಸುವ ಚಿತ್ರಗಳೂ ಆ ದಾಖಲೆಗಳಲ್ಲಿದ್ದವು. ಈ ದಾಖಲೆಗಳು ಬಹಿರಂಗವಾದ 1 ವಾರದಲ್ಲೇ ಇಸ್ರೇಲ್ ದಾಳಿ ಮಾಡಿದೆ. ಆದರೆ ಈ ಮುಂಚೆ ಅಂದಾಜಿಸಿದಂತೆ ಇರಾನ್‌ನ ತೈಲ ಬಾವಿಗಳು ಹಾಗೂ ಅಣ್ವಸ್ತ್ರ ಘಟಕಗಳ ಮೇಲೆ ಇಸ್ರೇಲ್ ಯಾವುದೇ ದಾಳಿ ಮಾಡಿಲ್ಲ. ಕೆಲವು ಮಿಲಿಟರಿ ನೆಲೆಗಳ ಮೇಲಷ್ಟೇ ದಾಳಿ ಮಾಡಿದೆ.
1981ರ ‘ಆಪರೇಷನ್ ಒಪೆರಾ’ ನೆನಪಿಸಿದ ಇಸ್ರೇಲ್ ದಾಳಿ
ಇಸ್ರೇಲ್‌ನ ಎಫ್35 ಯುದ್ಧವಿಮಾನಗಳು ಇರಾನ್ ಸನಿಹ ಬಂದು ನಡೆಸಿದ ವಾಯುದಾಳಿಯು 1981ರ ‘ಆಪರೇಷನ್ ಒಪೆರಾ’ ದಾಳಿಯನ್ನು ನೆನಪಿಸಿದೆ. 1981ರಲ್ಲಿ ಇರಾನ್-ಇರಾಕ್ ಯುದ್ಧದ ವೇಳೆ ಇರಾನ್‌ನ ಎಟ್ಜಿನ್ ಏರ್‌ಪೋರ್ಟ್‌ನಿಂದ ಹಾರಿದ 14 ಯುದ್ಧವಿಮಾನಗಳು ಇರಾಕ್ ಮೇಲೆ ದಾಳಿ ಮಾಡಿದ್ದವು ಹಾಗೂ ಸುರಕ್ಷಿತವಾಗಿ ಇಸ್ರೇಲ್‌ಗೆ ವಾಪಸ್ ಮರಳಿದ್ದವು.
ಇರಾನ್ ಪ್ರತೀಕಾರ ಭೀತಿ: ಇಸ್ರೇಲ್‌ನಲ್ಲೂ ಕಟ್ಟೆಚ್ಚರ
ಇರಾನ್ ಮೇಲೆ ತಾನು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ, ತನ್ನ ಮೇಲೂ ಇರಾನ್ ದಾಳಿ ನಡೆಸಬಹುದು ಎಂಬ ಆತಂಕ ಇಸ್ರೇಲ್‌ಗೆ ಇದೆ. ಹೀಗಾಗಿ ಮಾತನಾಡಿರುವ ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ, ‘ಅವರು ಇಸ್ರೇಲಿ ನಾಗರಿಕರು ಎಚ್ಚರಿಕೆ ವಹಿಒಸಬೇಕು ಮತ್ತು ಜಾಗರೂಕರಾಗಿರಬೇಕು’ ಎಂದು ಸೂಚಿಸಿದ್ದಾರೆ. ಅಲ್ಲದೆ, ಇಸ್ರೇಲ್‌ನಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.