ಕೋವಿಶೀಲ್ಡ್‌ನಿಂದ ಮಾರಕ ರಕ್ತ ಹೆಪ್ಪುಗಟ್ಟುವ ಸಮಸ್ಯೆ

| Published : May 17 2024, 12:31 AM IST / Updated: May 17 2024, 06:28 AM IST

ಕೋವಿಶೀಲ್ಡ್‌ನಿಂದ ಮಾರಕ ರಕ್ತ ಹೆಪ್ಪುಗಟ್ಟುವ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟನ್‌ ಹಾಗೂ ಸ್ವೀಡನ್‌ ಮೂಲದ ಔಷಧ ಕಂಪನಿ ಆಸ್ಟ್ರಾಜೆನೆಕಾ ಕೋವಿಡ್‌ಗಾಗಿ ತಯಾರಿಸಿದ ಕೋವಿಶೀಲ್ಡ್‌ ಲಸಿಕೆಯು ಅಪರೂಪದ ಮತ್ತು ಅತ್ಯಂತ ಮಾರಣಾಂತಿಕವಾದ ಸಮಸ್ಯೆ ‘ವಿಐಟಿಟಿ’ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ನವದೆಹಲಿ: ಬ್ರಿಟನ್‌ ಹಾಗೂ ಸ್ವೀಡನ್‌ ಮೂಲದ ಔಷಧ ಕಂಪನಿ ಆಸ್ಟ್ರಾಜೆನೆಕಾ ಕೋವಿಡ್‌ಗಾಗಿ ತಯಾರಿಸಿದ ಕೋವಿಶೀಲ್ಡ್‌ ಲಸಿಕೆಯು ಅಪರೂಪದ ಮತ್ತು ಅತ್ಯಂತ ಮಾರಣಾಂತಿಕವಾದ ಸಮಸ್ಯೆ ‘ವಿಐಟಿಟಿ’ (ವ್ಯಾಕ್ಸಿನ್‌ ಇಂಡ್ಯೂಸ್ಡ್‌ ಇಮ್ಯೂನ್‌ ಥ್ರಾಂಬೋಸೈಟೋಪೆನಿಯಾ ಅಂಡ್‌ ಥ್ರಾಂಬೋಸಿಸ್‌) ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತದಲ್ಲಿ ಕೋವಿಶೀಲ್ಡ್‌ ಹೆಸರಿನಲ್ಲಿ ದೇಶದ ಬಹುತೇಕ ಜನರಿಗೆ ನೀಡಲಾದ ಈ ಲಸಿಕೆಯಿಂದಾಗಿ ಅಪರೂಪದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸುತ್ತಿದೆ ಎಂದು ಸ್ವತಃ ಕಂಪನಿಯೇ ಬ್ರಿಟನ್‌ ನ್ಯಾಯಾಲಯದಲ್ಲಿ ತಿಳಿಸಿತ್ತು. ಆದರೆ ಇದೀಗ ಆಸ್ಟ್ರೇಲಿಯಾದ ಫ್ಲಿಂಡರ್ಸ್‌ ವಿಶ್ವವಿದ್ಯಾಲಯ ಹಾಗೂ ಅಂತಾರಾಷ್ಟ್ರೀಯ ತಜ್ಞರು ಹೊಸ ವರದಿಯೊಂದನ್ನ ಬಿಡುಗಡೆ ಮಾಡಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್‌ ಹಾಗೂ ಯುರೋಪ್‌ನಲ್ಲಿ ವ್ಯಾಕ್ಸ್‌ಜೆವ್ರಿಯಾ ಹೆಸರಲ್ಲಿ ಮಾರಾಟವಾದ ಈ ಲಸಿಕೆಯು ವಿಐಟಿಟಿ ಎಂಬ ಕಾಯಿಲೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ. ಈ ಅಧ್ಯಯನ ವರದಿ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.

ಅಪರೂಪದ ಪ್ರಕರಣಗಳಲ್ಲಿ ತನ್ನ ಕೊರೋನಾ ಲಸಿಕೆಯಿಂದ ಥ್ರಾಂಬೋಟಿಕ್‌ ಥ್ರಾಂಬೋಸೈಟೋಪೆನಿಕ್‌ ಸಿಂಡ್ರೋಮ್‌ (ಟಿಟಿಎಸ್‌) ಕಾಣಿಸಿಕೊಳ್ಳುತ್ತದೆ ಎಂದು ಬ್ರಿಟನ್‌ ಹೈಕೋರ್ಟ್‌ಗೆ ಆಸ್ಟ್ರಾಜೆನೆಕಾ ಕಂಪನಿ ತಿಳಿಸಿತ್ತು. ಆ ಸಮಸ್ಯೆಯಿಂದ ಬ್ರಿಟನ್‌ನಲ್ಲಿ 81 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿತ್ತು. ಆದರೆ ಆ ಲಸಿಕೆಯಿಂದ ವಿಐಟಿಟಿ ಸಮಸ್ಯೆಯೂ ಕಾಣಿಸಿಕೊಂಡಿದೆ ಎಂಬುದು ಅಧ್ಯಯನದ ಸಾರ.