ಸಾರಾಂಶ
ಬಾಸ್ಟನ್: ಅಮೆರಿಕದ ಖ್ಯಾತ ಖಗೋಳ ಕಂಪನಿ ‘ಆಸ್ಟ್ರಾನಾಮರ್’ ಸಿಇಒ ಆ್ಯಂಡಿ ಬೈರನ್ ಮತ್ತು ಅದೇ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬಟ್ ನಡುವಿನ ಅಕ್ರಮ ಪ್ರೇಮ ಪ್ರಸಂಗ ಕೋಲ್ಡ್ ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ಬಯಲಾಗಿದೆ.
ಬಾಸ್ಟನ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಇಬ್ಬರೂ ದಂಪತಿಗಳ ರೀತಿ ಆತ್ಮೀಯವಾಗಿರುವುದು ಮತ್ತು ಬೈರನ್ ಕ್ಯಾಬಟ್ ಸೊಂಟವನ್ನು ತನ್ನ ಕೈಗಳಿಂದ ಅಪ್ಪಿಕೊಂಡಿರುವ ದೃಶ್ಯವು ಸಮಾರಂಭದ ಕ್ಯಾಮರಾದಲ್ಲಿ ಸೆರೆಯಾಗಿದೆ ಹಾಗೂ ನೇರಪ್ರಸಾರವಾಗಿದೆ. ಕೂಡಲೇ ಅವಾಕ್ಕಾದ ಅವರು ಮುಖ ಮುಚ್ಚಿಕೊಂಡು ದೂರ ಸರಿಸಿದ್ದಾರೆ. ಈಗ ಇದರ ವಿಡಿಯೋ ವೈರಲ್ ಆಗಿದೆ ಹಾಗೂ ಪ್ರೇಮ ಸಂಬಂಧ ಬಗ್ಗೆ ಭಾರೀ ಚರ್ಚೆ ಹುಟ್ಟು ಹಾಕಿದೆ.
ಈ ಬೆನ್ನಲ್ಲೇ ಬೈರನ್ ಪತ್ನಿ ಮೇಗನ್ ಕೆರ್ರಿಗನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಪತಿಯ ಹೆಸರನ್ನು ಅಳಿಸಿ ಹಾಕಿದ್ದು, ಇದು ಇಬ್ಬರ ನಡುವಿನ ವಿಚ್ಛೇದನ ವದಂತಿಗೆ ಕಾರಣವಾಗಿದೆ.
ಇದೇ ವೇಳೆ, ಇವರಿಬ್ಬರನ್ನೂ ಕ್ಯಾಮರಾದಲ್ಲಿ ಸೆರೆ ಹಿಡಿದ ಮಹಿಳೆಯು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ‘ಯಾರೊ ಚಕ್ಕಂದ ಆಡುತ್ತಿದ್ದಾರೆ ಎಂದು ಕ್ಯಾಮರಾದಲ್ಲಿ ಸೆರೆ ಹಿಡಿದೆ. ಅವರು ಸಿಇಒ ಎಂದು ಗೊತ್ತಿರಲಿಲ್ಲ. ಒಬ್ಬ ದೊಡ್ಡ ವ್ಯಕ್ತಿ ಹೀಗೆ ಬಹಿರಂಗವಾಗಿ ನಡೆದುಕೊಳ್ಳುವುದು ತಪ್ಪು. ಆದರೂ ಈ ದೃಶ್ಯ ಪ್ರಸಾರ ಮಾಡಿ ಅವರ ವೈವಾಹಿಕ ಜೀವನ ಹಾಳು ಮಾಡಿದ್ದಕ್ಕೆ ಬೇಸರವಿದೆ’ ಎಂದಿದ್ದಾರೆ.