ಸಾರಾಂಶ
ನವದೆಹಲಿ : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಗುತ್ತಿಗೆಯಲ್ಲಿನ ಶೇ.4ರಷ್ಟು ಮುಸ್ಲಿಂ ಮೀಸಲನ್ನು ‘ಲಾಲಿಪಾಪ್’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ ಹಾಗೂ ‘ಮೀಸಲು ಕೋರ್ಟಲ್ಲೇ ರದ್ದಾಗುತ್ತದೆ’ ಎಂದಿದ್ದಾರೆ.
‘ಟೈಮ್ಸ್ ನೌ ಶೃಂಗಸಭೆ-2025’ ಸಂವಾದದಲ್ಲಿ ಮಾತನಾಡಿದ ಶಾ, ‘ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿ ಸಂವಿಧಾನದ ಉಲ್ಲಂಘನೆಯಾಗಿದೆ. ಧರ್ಮದ ಆಧಾರದ ಮೇಲೆ ಯಾವುದೇ ಕೋಟಾವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಮತ್ತು ನ್ಯಾಯಾಲಯಗಳು ಅದನ್ನು ರದ್ದುಪಡಿಸುತ್ತವೆ’ ಎಂದು ಹೇಳಿದರು.
‘ಮತಬ್ಯಾಂಕ್ ರಾಜಕೀಯಕ್ಕಾಗಿ, ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಗುತ್ತಿಗೆ ಮೀಸಲು ನೀಡಲು ಬಯಸುತ್ತದೆ, ಆದರೆ ಗುತ್ತಿಗೆಗಳನ್ನು ಗುಣಮಟ್ಟ ಮತ್ತು ಮೌಲ್ಯದ ಆಧಾರದ ಮೇಲೆ ನೀಡಬೇಕು, ಧರ್ಮದ ಆಧಾರದ ಮೇಲೆ ಅಲ್ಲ’ ಎಂದು ಶಾ ಹೇಳಿದರು.
ಜಾತಿ ಜನಗಣತಿಗೆ ಕಾಂಗ್ರೆಸ್ ಬೇಡಿಕೆಯ ಕುರಿತು ಮಾತನಾಡಿದ ಗೃಹ ಸಚಿವರು, ‘ವಿರೋಧ ಪಕ್ಷವೇ ಹಿಂದೆ ಇಂತಹ ಪ್ರಕ್ರಿಯೆಯನ್ನು ವಿರೋಧಿಸಿತ್ತು. 2011ರಲ್ಲಿ ಅವರು (ಕಾಂಗ್ರೆಸ್) ಜಾತಿಗಳ ಬಗ್ಗೆ ಸಮೀಕ್ಷೆ ನಡೆಸಿದ್ದರು ಆದರೆ ಅದರ ಫಲಿತಾಂಶವನ್ನು ಘೋಷಿಸಲಿಲ್ಲ. ಈಗ ನಾವು ಜಾತಿ ಗಣತಿಗಾಗಿ ಏನು ಮಾಡಬೇಕು ಎಂದು ಆಂತರಿಕ ಪ್ರಕ್ರಿಯೆ ನಡೆಸುತ್ತಿದ್ದೇವೆ. ಒಮ್ಮೆ ಅಂತಿಮ ಆಯಿತು ಎಂದರೆ ಮುನ್ನಡೆಯುತ್ತೇವೆ’ ಎಂದರು.