ಭಾರತವನ್ನು ಅತ್ಯಾಪ್ತ ಸ್ನೇಹಿತ ರಾಷ್ಟ್ರವೆಂದು ಪರಿಗಣಿಸುವ ಇಸ್ರೇಲ್‌ - ನಮ್ಮ ಪಾಲಿಗೆ ‘ವರ’ ಎಂದ ನೆತನ್ಯಾಹು

| Published : Sep 29 2024, 01:55 AM IST / Updated: Sep 29 2024, 04:48 AM IST

ಭಾರತವನ್ನು ಅತ್ಯಾಪ್ತ ಸ್ನೇಹಿತ ರಾಷ್ಟ್ರವೆಂದು ಪರಿಗಣಿಸುವ ಇಸ್ರೇಲ್‌ - ನಮ್ಮ ಪಾಲಿಗೆ ‘ವರ’ ಎಂದ ನೆತನ್ಯಾಹು
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತ, ಈಜಿಪ್ಟ್‌, ಸುಡಾನ್‌, ಸೌದಿ ಅರೇಬಿಯಾ ಇರುವ ನಕ್ಷೆ ತೋರಿಸಿ 'ಇದು ವರ' ಎಂದಿದ್ದಾರೆ. ಇರಾನ್‌, ಇರಾಕ್‌, ಸಿರಿಯಾ ಮತ್ತು ಯೆಮನ್‌ ನಕ್ಷೆಯನ್ನು ತೋರಿಸಿ 'ಇದು ಶಾಪ' ಎಂದಿದ್ದಾರೆ.

ವಿಶ್ವಸಂಸ್ಥೆ: ಭಾರತವನ್ನು ಅತ್ಯಾಪ್ತ ಸ್ನೇಹಿತ ರಾಷ್ಟ್ರವೆಂದು ಪರಿಗಣಿಸುವ ಇಸ್ರೇಲ್‌, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವಸಂಸ್ಥೆಯಲ್ಲೇ ಭಾರತದ ನಕ್ಷೆಯನ್ನು ತೋರಿಸಿ ‘ವರ’ ಎಂದು ಬಣ್ಣಿಸಿದೆ.

ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸಲು ಆರಂಭಿಸಿದ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮೊದಲ ಭಾಷಣ ಮಾಡಿದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು 2 ನಕ್ಷೆಗಳನ್ನು ತೋರಿಸಿದರು. ಎಡಗೈಲಿ ಕಪ್ಪು ಬಣ್ಣ ಬಳಿದ ಇರಾನ್‌, ಇರಾಕ್‌, ಸಿರಿಯಾ ಮತ್ತು ಯೆಮನ್‌ ನಕ್ಷೆಯನ್ನು ತೋರಿಸಿ ‘ಇದು ಶಾಪ’ ಎಂದರು. ಬಲಗೈಲಿ ಭಾರತ, ಈಜಿಪ್ಟ್‌, ಸುಡಾನ್‌, ಸೌದಿ ಅರೇಬಿಯಾ ಇರುವ ಹಸಿರು ನಕ್ಷೆ ತೋರಿಸಿ ‘ಇದು ವರ’ ಎಂದು ಹೇಳಿದರು.

ಕುತೂಹಲಕರ ಸಂಗತಿಯೆಂದರೆ, ಅವರು ತೋರಿಸಿದ ಎರಡೂ ನಕ್ಷೆಯಲ್ಲಿ ಪ್ಯಾಲೆಸ್ತೀನ್‌ನ ಭಾಗಗಳಾದ ವೆಸ್ಟ್‌ ಬ್ಯಾಂಕ್‌ ಹಾಗೂ ಗಾಜಾ ಪಟ್ಟಿ ಇಸ್ರೇಲ್‌ನ ಭಾಗಗಳಾಗಿದ್ದವು.

ಇನ್ನು, ತಮ್ಮ ಭಾಷಣದಲ್ಲಿ ಅವರು ಇರಾನ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಮಧ್ಯಪ್ರಾಚ್ಯದಲ್ಲಿನ ಅಶಾಂತಿಗೆ ಇರಾನ್‌ ದೇಶವೇ ಮೂಲ ಕಾರಣ ಎಂದು ನೇರವಾಗಿ ಆಪಾದಿಸಿದರು. ‘ಇರಾನ್‌ಗೆ ನನ್ನಲ್ಲಿ ಕಠಿಣ ಸಂದೇಶವಿದೆ. ನೀವು ದಾಳಿ ನಡೆಸಿದರೆ ನಾವೂ ನಿಮ್ಮ ಮೇಲೆ ದಾಳಿ ನಡೆಸುತ್ತೇವೆ. ಇಸ್ರೇಲ್‌ನ ಉದ್ದ ಬಾಹುಗಳು ತಲುಪದೆ ಇರುವ ಜಾಗ ಇರಾನ್‌ನಲ್ಲಿ ಯಾವುದೂ ಇಲ್ಲ. ಈ ಮಾತು ಇಡೀ ಮಧ್ಯಪ್ರಾಚ್ಯಕ್ಕೆ ಅನ್ವಯಿಸುತ್ತದೆ’ ಎಂದು ಹೇಳಿದರು.