ಸಾರಾಂಶ
ಭಾರತದ ಸ್ಪಷ್ಟ ನಿರಾಕರಣೆಯ ಬಳಿಕವೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂಬ ಸುಳ್ಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪುನರುಚ್ಚರಿಸಿದ್ದಾರೆ.
- ಭಾರತ-ಪಾಕ್ ಸೇರಿ 7 ತಿಂಗಳಲ್ಲಿ 7 ಯುದ್ಧ ನಿಲ್ಲಿಸಿದ್ದೇನೆ
- ರಷ್ಯಾಗೆ ಯುದ್ಧಕ್ಕಾಗಿ ಭಾರತ, ಚೀನಾ ದೇಣಿಗೆ: ಆರೋಪ- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಮತ್ತದೇ ಹೇಳಿಕೆ
ವಿಶ್ವಸಂಸ್ಥೆ: ಭಾರತದ ಸ್ಪಷ್ಟ ನಿರಾಕರಣೆಯ ಬಳಿಕವೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂಬ ಸುಳ್ಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪುನರುಚ್ಚರಿಸಿದ್ದಾರೆ. ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 80ನೇ ಉನ್ನತ ಮಟ್ಟದ ಅಧಿವೇಶನದಲ್ಲಿ ಮಾತನಾಡಿದ ಟ್ರಂಪ್, ‘ಕೇವಲ 7 ತಿಂಗಳ ಅವಧಿಯಲ್ಲಿ ನಾನು 7 ಮುಗಿಯಲಾರದ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಎಲ್ಲಾ ಯುದ್ಧಗಳಲ್ಲೂ ಲೆಕ್ಕವಿಲ್ಲದಷ್ಟು ಜನರು ಕೊಲ್ಲಲ್ಪಟ್ಟರು. ಇದರಲ್ಲಿ ಕಾಂಬೋಡಿಯಾ ಮತ್ತು ಥಾಯ್ಲೆಂಡ್, ಕೊಸೊವೊ ಮತ್ತು ಸೆರ್ಬಿಯಾ, ಕಾಂಗೋ ಮತ್ತು ರವಾಂಡಾ, ಪಾಕಿಸ್ತಾನ ಮತ್ತು ಭಾರತ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ನ ಕ್ರೂರ, ಹಿಂಸಾತ್ಮಕ ಯುದ್ಧಗಳು ಸೇರಿವೆ’ ಎಂದರು. ಜೊತೆಗೆ, ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಮತ್ತು ಚೀನಾ ದೇಶಗಳು ರಷ್ಯಾ - ಉಕ್ರೇನ್ ಯುದ್ಧಕ್ಕೆ ದೇಣಿಗೆ ಸುರಿಯುತ್ತಿವೆ ಎಂದು ಆರೋಪಿಸಿರುವ ಟ್ರಂಪ್, ವಿಶ್ವಸಂಸ್ಥೆಯು ಈ ದೇಶಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಭಾರತ ಈಗಾಗಲೇ ಕದನ ವಿರಾಮದಲ್ಲಿ ಮೂರನೇ ದೇಶದ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಟ್ರಂಪ್ ಕನಿಷ್ಠ 50 ಸಲ ಇದೇ ಸುಳ್ಳನ್ನು ಹೇಳಿದ್ದಾರೆ. ಇನ್ನು ರಷ್ಯಾ ತೈಲ ಖರೀದಿ ವಿಚಾರವಾಗಿ ಭಾರತದ ಮೇಲೆ ಶೇ.50 ತೆರಿಗೆ ವಿಧಿಸಿದ ಬಳಿಕವೂ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.==
ಎಚ್1ಬಿ ಲಾಟರಿ ವ್ಯವಸ್ಥೆಗೆ ಟ್ರಂಪ್ ಕೊಕ್ ಸಂಭವವಾಷಿಂಗ್ಟನ್: ಶುಲ್ಕ ಏರಿಕೆ ಬಳಿಕ ಎಚ್1ಬಿ ವೀಸಾ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಬದಲಾವಣೆ ತರುವ ಸುಳಿವು ನೀಡಿದ್ದಾರೆ. ಲಾಟರಿ ಆಧರಿತ ಎಚ್1ಬಿ ವೀಸಾ ವ್ಯವಸ್ಥೆಯನ್ನು ರದ್ದು ಮಾಡುವ ಪ್ರಸ್ತಾಪ ಅವರ ಮುಂದಿದೆ. ಇದರ ಬದಲು ವೇತನ ಆಧರಿತ ವೀಸಾ ನೀಡಲು ಚಿಂತನೆ ನಡೆದಿದೆ. ಅರ್ಥಾತ್ ಹೆಚ್ಚು ವೇತನ ಇರುವವರಿಗೆ ಮೊದಲ ಆದ್ಯತೆಯಲ್ಲಿ ವೀಸಾ ದೊರಕಲಿದೆ.
==ನಡುರಸ್ತೆಯಲ್ಲಿ ತಡೆದರೆಂದು ಟ್ರಂಪ್‌ಗೇ ಮ್ಯಾಕ್ರನ್ ಕರೆ!
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸವಾರಿ ಸಾಗಲಿದ್ದುದರಿಂದ ನಗರದ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆ ವೇಳೆ ನಡೆದುಕೊಂಡು ಹೊರಟಿದ್ದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರನ್ನೂ ಪೊಲೀಸರು ಅಡ್ಡಗಟ್ಟಿ ನಿಲ್ಲಿಸಿಬಿಟ್ಟಿದ್ದಾರೆ. ಆಗ ಮ್ಯಾಕ್ರಾನ್ ಟ್ರಂಪ್‌ಗೇ ಕರೆ ಮಾಡಿ, ‘ನಿಮ್ಮಿಂದಾಗಿ ನಾನು ರಸ್ತೆಬದಿ ನಿಂತಿದ್ದೇನೆ’ ಎಂದು ಆತ್ಮೀಯವಾಗಿ ದೂರಿದ್ದಾರೆ.ನ್ಯೂಯಾರ್ಕ್‌ನಲ್ಲಿರುವ ಫ್ರಾನ್ಸ್ ದೂತಾವಾಸದತ್ತ ಸಿಬ್ಬಂದಿಯೊಂದಿಗೆ ನಡೆದು ಹೊರಟಿದ್ದ ಮ್ಯಾಕ್ರಾನ್‌ರನ್ನು ಪೊಲೀಸರು ತಡೆದು, ‘ಅಧ್ಯಕ್ಷರ(ಟ್ರಂಪ್) ಬೆಂಗಾವಲು ವಾಹನಗಳೊಂದಿಗೆ ಸಾಗಲಿದ್ದಾರೆ. ಹಾಗಾಗಿ ಅನ್ಯರ ಸಂಚಾರವನ್ನು ನಿಲ್ಲಿಸಲಾಗಿದೆ’ ಎಂದು ಹೇಳಿದ್ದಾರೆ. ಕೂಡಲೇ ತಮ್ಮ ಮೊಬೈಲ್ ತೆಗೆದ ಮ್ಯಾಕ್ರಾನ್ ನೇರವಾಗಿ ಟ್ರಂಪ್‌ಗೇ ಕರೆ ಮಾಡಿ, ‘ನಿಮಗಾಗಿ ಸಂಚಾರವನ್ನು ನಿಲ್ಲಿಸಿಬಿಟ್ಟಿದ್ದಾರೆ. ನಾನಿಲ್ಲಿ ರಸ್ತೆ ಬದಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.