ಸಾರಾಂಶ
ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಅಧಿಕಾರ ಸ್ವೀಕರಿಸಿದ್ದಾರೆ. ಆತಿಶಿ ಜೊತೆಗೆ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನವದೆಹಲಿ: ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ದಿಲ್ಲಿ ಸಿಎಂ ಆಗಿ ಆಯ್ಕೆಯಾಗಿದ್ದ ಆತಿಶಿ (43) ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.ಆತಿಶಿ ಜೊತೆಗೆ ಸೌರಭ್ ಭಾರದ್ವಾಜ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸ್ಸೇನ್ ಮತ್ತು ಮುಕೇಶ್ ಅಹ್ಲಾವತ್ ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ಮುಕೇಶ್‌ಗೆ ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಾಯಿತು.
ಆತಿಶಿ ದೆಹಲಿಯ 8ನೇ, ದೆಹಲಿಯ 3ನೇ ಮಹಿಳಾ ಸಿಎಂ ಮತ್ತು ದಿಲ್ಲಿಯ ಅತಿಕಿರಿಯ ಸಿಎಂ, ದೇಶದ 17ನೇ ಮಹಿಳಾ ಸಿಎಂ ಮತ್ತು ದೇಶದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ 2ನೇ ಮಹಿಳಾ ಸಿಎಂ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ದಿಲ್ಲಿಯ ಮಹಿಳಾ ಸಿಎಂಗಳಾಗಿದ್ದರು.
ಪ್ರಮಾಣದ ವಚನ ಬೆನ್ನಲ್ಲೇ ಖಾತೆ ಹಂಚಿಕೆ ಮಾಡಲಾಗಿದ್ದು ಆತಿಷಿ 13 ಖಾತೆ ತಮ್ಮ ಬಳಿ ಇಟ್ಟುಕೊಂಡಿದ್ದರೆ, ಸೌರಭ್‌ಗೆ 8 ಖಾತೆ ನೀಡಲಾಗಿದೆ.