ಸಾರಾಂಶ
ಹೈದರಾಬಾದ್: ಸರ್ಕಾರಿ ಜಾಗ ಅತಿಕ್ರಮದ ಆರೋಪದ ಮೇಲೆ ನಟ ನಾಗಾರ್ಜುನಗೆ ಸೇರಿದ ಕನ್ವೆನ್ಷನ್ ಸೆಂಟರ್ ಅನ್ನು ಅಧಿಕಾರಿಗಳು ಶನಿವಾರ ಧ್ವಂಸಗೊಳಿಸಿದ್ದಾರೆ. ಆದರೆ ಅತಿಕ್ರಮಣದ ಆರೋಪ ತಳ್ಳಿಹಾಕಿರುವ ನಾಗಾರ್ಜುನ, ಪ್ರಕರಣದ ಕುರಿತು ನ್ಯಾಯಾಲಯ ತಡೆ ನೀಡಿರುವಾಗ ಅಧಿಕಾರಿಗಳು ಏಕಾಏಕಿ ಕಟ್ಟಡ ಧ್ವಂಸಗೊಳಿಸಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಏನಿದು ಪ್ರಕರಣ: ಹೈದ್ರಾಬಾದ್ ತುಮ್ಮಿಡಿಕುಂಟಾ ಕೆರೆಗೆ ಹೊಂದಿಕೊಂಡಂತೆ ನಟ ನಾಗಾರ್ಜುನ 10 ಎಕರೆ ಪ್ರದೇಶದಲ್ಲಿ ಎನ್-ಕನ್ಷೆನ್ಷರ್ ಸೆಂಟರ್ ಹೊಂದಿದ್ದಾರೆ. ಆದರೆ ಕಟ್ಟಡ ನಿರ್ಮಾಣದ ವೇಳೆ ಕೆರೆಗೆ ಸೇರಿದ 3 ಎಕರೆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಹಿಂದಿನಿಂದಲೂ ಆರೋಪವಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿ ಕಟ್ಟಡ ಧ್ವಂಸಕ್ಕೆ ನ್ಯಾಯಾಲಯ ತಡೆ ನೀಡಿತ್ತು.
ಅದರ ನಡುವೆಯೇ ಹೈದ್ರಾಬಾದ್ ವಿಪತ್ತು ನಿರ್ವಹಣಾ ಮತ್ತು ಆಸ್ತಿ ನಿಗಾ ಏಜೆನ್ಸಿಯ ಅಧಿಕಾರಿಗಳು ಶನಿವಾರ ಏಕಾಏಕಿ ಅತಿಕ್ರಮಿಸಿದ ಆರೋಪದ ಜಾಗದಲ್ಲಿ ನಿರ್ಮಿತ ಕನ್ಷೆನ್ಷನ್ ಸೆಂಟರ್ ಧ್ವಂಸಗೊಳಿಸಿದ್ದಾರೆ.
ಈ ಕುರಿತು ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ, ಈ ಜಮೀನು ಪಟ್ಟಾ ಭೂಮಿಯಾಗಿದ್ದು, ನಾವು ಯಾವುದೇ ರೀತಿ ಅತಿಕ್ರಮಣ ಮಾಡಿಲ್ಲ. ಕಾನೂನು ಪಾಲಿಸುವ ಪ್ರಜೆಯಾಗಿ ನಾನು ಅತಿಕ್ರಮಣ ಮಾಡಿದ್ದೇನೆ ಎಂದು ನ್ಯಾಯಾಲಯ ತಿಳಿಸಿದ್ದರೆ, ನಾನೇ ನನ್ನ ಕಟ್ಟಡವನ್ನು ನೆಲಸಮಗೊಳಿಸುತ್ತಿದ್ದೆ. ಆದರೆ ಅಧಿಕಾರಿಗಳು ತಪ್ಪು ಮಾಹಿತಿ ಆಧಾರದ ಮೇಲೆ ಈ ಕ್ರಮ ಕೈಗೊಂಡಿದ್ದಾರೆ. ಇದನ್ನು ನಾನು ಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ ಎಂದರು.