ಸಾರಾಂಶ
ಮುಂಬೈ: ವಿಶ್ವವಿಖ್ಯಾತ ಅಮೆರಿಕದ ಇಂಟೆಲ್ ಕಂಪನಿಯ ಪೆಂಟಿಯಮ್ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಅವತಾರ್ ಸೈನಿ (68) ಗುರುವಾರ ಬೆಳಗ್ಗೆ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಅಮೆರಿಕದಲ್ಲಿ ಇಂಟೆಲ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಸೈನಿ ಬಳಿಕ 1982-2004ರವರೆಗೆ ಇಂಟೆಲ್ ಇಂಡಿಯಾದ ಉಪಾಧ್ಯಕ್ಷರಾಗಿದ್ದರು. ಈ ವೇಳೆ ಅವರು ಕಂಪನಿಯ ಅತ್ಯಂತ ಜನಪ್ರಿಯ ಉತ್ಪನ್ನಗಳಾದ ಇಂಟೆಲ್ 386, ಇಂಟೆಲ್ 486 ಮತ್ತು ಪೆಂಟಿಯಮ್ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಮೈಕ್ರೋಪ್ರೊಸೆಸರ್‌ಗಳ ವಿನ್ಯಾಸಕಾರ ಮತ್ತು ಅಭಿವೃದ್ಧಿಗಾರನಾಗಿ ಹೆಸರು ಮಾಡಿದ್ದ ಸೈನಿ ಈ ವಿಷಯದಲ್ಲಿ ಹಲವು ಪೇಟೆಂಟ್ ಕೂಡಾ ಹೊಂದಿದ್ದಾರೆ.ಗುರುವಾರ ಬೆಳಗ್ಗೆ 5.30ರ ವೇಳೆಗೆ ಸೈನಿ ತಮ್ಮ ಸ್ನೇಹಿತರೊಡಗೂಡಿ ಸೈಕಲ್ ಮೇಲೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಸೈನಿ ಹೆಲ್ಮೆಟ್ ಧರಿಸಿದ್ದರಾದರೂ, ತೀವ್ರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.