ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ!

ಬುಕ್‌ ಮಾಡಿದ 48 ತಾಸಲ್ಲಿ ರದ್ದು ಮಾಡಿದರೆ ಶುಲ್ಕವಿಲ್ಲ

ಡಿಜಿಸಿಎಯಿಂದ ಟಿಕೆಟ್‌ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ

ಏರ್‌ಲೈನ್ಸ್‌ ವೆಬ್‌ಸೈಟಲ್ಲಿ ಬುಕ್‌ ಮಾಡಿದ ಟಿಕೆಟ್‌ಗೆ ಅನ್ವಯ

24 ಗಂಟೆಯೊಳಗೆ ಟಿಕೆಟ್‌ನಲ್ಲಿನ ಹೆಸರು ಸರಿಪಡಿಸಲೂ ಅವಕಾಶ

ಪಿಟಿಐ ನವದೆಹಲಿ

ಇನ್ನು ಮುಂದೆ ವಿಮಾನ ಟಿಕೆಟ್‌ ಅನ್ನು ಬುಕ್‌ ಮಾಡಿದ 48 ಗಂಟೆ ಒಳಗೆ ಟಿಕೆಟ್‌ ರದ್ದು ಅಥವಾ ಬದಲಾವಣೆ ಮಾಡಿದರೆ ಏರ್‌ಲೈನ್ಸ್‌ ಸಂಸ್ಥೆಗೆ ಯಾವುದೇ ರದ್ದತಿ ಶುಲ್ಕ ಪಾವತಿಸಬೇಕಿಲ್ಲ!

ಹೌದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದೀಗ ಟಿಕೆಟ್‌ ಬುಕ್ಕಿಂಗ್‌ ಕುರಿತ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತಂದಿದ್ದು, ಈ ಆದೇಶ ಹೊರಡಿಸಿದೆ.

24 ಗಂಟೆಗಳಲ್ಲಿ ಹೆಸರು ತಿದ್ದುಪಡಿಗೆ ಅವಕಾಶ:

ಇದೇ ವೇಳೆ, ಟಿಕೆಟ್ ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ದೋಷವನ್ನು ಎತ್ತಿ ತೋರಿಸಿದಾಗ, ವಿಮಾನಯಾನ ಸಂಸ್ಥೆಗಳು ಅದೇ ವ್ಯಕ್ತಿಯ ಹೆಸರಿನ ತಿದ್ದುಪಡಿಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು ಎಂದು ಹೇಳಿದೆ.

ಈ ಎಲ್ಲಾ ವಿನಾಯ್ತಿಗಳು ಏರ್‌ಲೈನ್ಸ್‌ನ ವೆಬ್‌ಸೈಟ್‌ನಲ್ಲಿ ನೇರವಾಗಿ ಬುಕ್ ಮಾಡಿದ ಟಿಕೆಟ್‌ಗಳಿಗಷ್ಟೇ ಅನ್ವಯ ಆಗಲಿದೆ.

ಟ್ರಾವೆಲ್‌ ಏಜೆಂಟ್‌ ಅಥವಾ ಪೋರ್ಟಲ್‌ ಮೂಲಕ ಖರೀದಿಸಿದ್ದರೆ ಶುಲ್ಕ ವಿಧಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಏರ್‌ಲೈನ್ಸ್‌ ಸಂಸ್ಥೆಗಳಿಗೇ ಬಿಡಲಾಗಿದೆ. ಏಕೆಂದರೆ ಈ ಏಜೆಂಟರನ್ನು ಏರ್‌ಲೈನ್ಸ್‌ ಸಂಸ್ಥೆಗಳೇ ನೇಮಿಸಿರುತ್ತವೆ ಎಂದು ಡಿಜಿಸಿಎ ಹೇಳಿದೆ.

ರೀಫಂಡ್‌ಗೆ ಕಾಲಮಿತಿ:

ಈ ನಡುವೆ, ಇನ್ನು ಮುಂದೆ ಟಿಕೆಟ್‌ ರದ್ದತಿ ಬಳಿಕದ ರೀಫಂಡ್‌ ಅಥವಾ ಮರುಪಾವತಿ ಪ್ರಕ್ರಿಯೆ 14 ಕೆಲಸದ ದಿನದೊಳಗೆ ಪೂರ್ಣಗೊಳ್ಳಬೇಕು ಎಂದೂ ಡಿಜಿಸಿಎ ಷರತ್ತು ವಿಧಿಸಿದೆ.

ಇದಲ್ಲದೆ ವೈದ್ಯಕೀಯ ತುರ್ತು ವಿಚಾರಗಳಿಗೆ ಸಂಬಂಧಿಸಿದ ಟಿಕೆಟ್‌ ರದ್ದತಿ ವಿಚಾರದಲ್ಲೂ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.

ಪ್ರಯಾಣಿಕರಿಂದ ಟಿಕೆಟ್‌ ರದ್ದತಿ, ಬದಲಾವಣೆ ಮತ್ತು ವಿಳಂಬವಾಗಿ ಮರುಪಾವತಿ ಕುರಿತು ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಡಿಜಿಸಿಎ ಈ ನಿರ್ಧಾರ ತೆಗೆದುಕೊಂಡಿದೆ. ಡಿಜಿಸಿಎ ಈ ಕ್ರಮವನ್ನು ಪ್ರಯಾಣಿಕ ಸ್ನೇಹಿ ನಿರ್ಧಾರ ಎಂದು ಬಣ್ಣಿಸಲಾಗಿದ್ದು, ಇದರಿಂದ ಈವರೆಗೆ ಪ್ರಯಾಣಿಕರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿದಂತಾಗಿದೆ.