ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌ : ರಾಮಮಂದಿರ ದರ್ಶನ ಅವಧಿ ವಿಸ್ತರಣೆ

| Published : Dec 29 2024, 01:19 AM IST / Updated: Dec 29 2024, 04:32 AM IST

ಸಾರಾಂಶ

ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ.

ಅಯೋಧ್ಯೆ: ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ. ಮತ್ತೊಂದೆಡೆ ಪ್ರವಾಸಿಗರಿಂದ ಸುತ್ತಲಿನ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ.

ಜ.1ಕ್ಕೆ ರಾಮಮಂದಿರಕ್ಕೆ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಬಹುದು ಎನ್ನುವ ಕಾರಣಕ್ಕೆರಾಮ ಜನ್ಮಭೂಮಿ ಟ್ರಸ್ಟ್‌ ಭಕ್ತರ ಅನುಕೂಲಕ್ಕಾಗಿ ಮಂದಿರದ ದರ್ಶನ ಅವಧಿಯನ್ನು ವಿಸ್ತರಿಸಿದೆ. ಜೊತೆಗೆ ಅಯೋಧ್ಯೆ ಹಾಗೂ ಸಮೀಪದ ಫೈಜಾಬಾದ್‌ನ ಹೋಟೆಲ್‌ಗಳು ಪ್ರವಾಸಿಗರ ಕಾರಣದಿಂದ ಈಗಾಗಲೇ ಬಹುತೇಕ ಭರ್ತಿಯಾಗಿವೆ.ಅದರಲ್ಲಿಯೂ ಕೆಲ ಹೋಟೆಲ್‌ಗಳಲ್ಲಿ ಬೇಡಿಕೆಯ ಕಾರಣಕ್ಕೆ ಒಂದು ದಿನಕ್ಕೆ 10 ಸಾವಿರ ರು. ತನಕ ಗ್ರಾಹಕರಿಗೆ ದರ ನಿಗದಿ ಮಾಡಿವೆ.

31ರೊಳಗೆ ದಲ್ಲೇವಾಲ್‌ ಆಸ್ಪತ್ರೆಗೆ: ಸುಪ್ರೀಂ ಆದೇಶ

ನವದೆಹಲಿ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ರೈತ ನಾಯಕ ಜಗಜೀತ್‌ ಸಿಂಗ್‌ ದಲ್ಲೇವಾಲ್‌ ಅವರನ್ನು ಡಿ.31ರ ಒಳಗೆ ಆಸ್ಪತ್ರೆಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಪಂಜಾಬ್‌ ಸರ್ಕಾರಕ್ಕೆ ಗಡುವು ನೀಡಿದೆ.

ದಲ್ಲೇವಾಲ್‌ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ, ದ್ವಿಸದಸ್ಯ ಪೀಠ, ರೈತ ನಾಯಕನಿಗೆ ಚಿಕಿತ್ಸೆ ಕೊಡಿಸಬೇಕೆಂಬ ಉದ್ದೇಶ ಪಂಜಾಬ್‌ ಸರ್ಕಾರಕ್ಕೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪಂಜಾಬ್‌ ಅಡ್ವೊಕೇಟ್‌ ಜನರಲ್‌, ದಲ್ಲೇವಾಲ್‌ ಅವರ ಆರೋಗ್ಯ ವಿಚಾರಿಸಲು ಪಂಜಾಬ್‌ ಸರ್ಕಾರದ ತಂಡ ತೆರಳಿತ್ತು. ಆದರೆ ಅಲ್ಲಿನ ರೈತರು ದಲ್ಲೇವಾಲ್‌ ಸುತ್ತ ಕೋಟೆ ರೀತಿ ಮಾಡಿಕೊಂಡು ಚಿಕಿತ್ಸೆಗೆ ಬಿಡಲಿಲ್ಲ. ಕೊನೆ ಪಕ್ಷ ಡ್ರಿಪ್ಸ್‌ ಹಾಕಲು ಬಿಡಲಿಲ್ಲ ಎಂದರು.

ಇದಕ್ಕೆ ಅಸಮಧಾನಗೊಂಡ ಪೀಠ, ರೈತನಾಯಕನಿಗೆ ಚಿಕಿತ್ಸೆಗೆ ಬಿಡದಿರುವುದು, ಆತ್ಮಹತ್ಯೆಗೆ ಪ್ರಚೋದನೆ ಆಗುತ್ತದೆ. ಅವರು ಕ್ರಿಮಿನಲ್‌ ಕೇಸ್‌ಗೆ ಯೋಗ್ಯರಾಗುತ್ತಾರೆ. ಇವರ ಮನವೊಲಿಕೆಗೆ ಪಂಜಾಬ್‌ ಸರ್ಕಾರ ಮುಂದಾಗಬೇಕು. ಅಲ್ಲಿನ ವಸ್ತುಸ್ಥಿತಿ ಅರಿಯಲು ಸ್ಥಳೀಯ ಅಧಿಕಾರಿಗಿಂತ ಉತ್ತಮ ಜಡ್ಜ್‌ ಬೇಕಿಲ್ಲ. ಅವರೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಡಿ.31ರ ಒಳಗೆ ದಲ್ಲೇವಾಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಿತು.

111 ಔಷಧಗಳು ನಿಗದಿತ ಗುಣಮಟ್ಟ ಹೊಂದಿಲ್ಲ: ಕಳೆದ ತಿಂಗಳ ಪರೀಕ್ಷೆ ವೇಳೆ ಪತ್ತೆ

ನವದೆಹಲಿ: ಕಳೆದ ನವೆಂಬರ್‌ನಲ್ಲಿ ದೇಶವ್ಯಾಪಿ ವಿವಿಧ ಔಷಧಗಳ ಮಾದರಿ ಪರೀಕ್ಷಿಸಿದ ವೇಳೆ 111 ಔಷಧಗಳು ನಿಗದಿತ ಗುಣಮಟ್ಟ ಹೊಂದದೇ ಇರುವುದು ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದೆ. ಜೊತೆಗೆ ಕೆಲವು ಔಷಧಗಳು ಮಾರುಕಟ್ಟೆಗೆ ಬಿಡುಗಡೆಯಾಗಲು ಪರವಾನಗಿಯನ್ನೇ ಹೊಂದಿರಲಿಲ್ಲ. ಅಲ್ಲದೆ ಎರಡು ಔಷಧಗಳ ವಿಷಪೂರಿತವಾಗಿದ್ದು ಕೂಡಾ ಪತ್ತೆಯಾಗಿದೆ ಎಂಬುದು ಕಂಡುಬಂದಿದೆ ಎಂದು ಅದು ಹೇಳಿದೆ. ಈ ಪೈಕಿ 41 ಮಾದರಿಯನ್ನು ಕೇಂದ್ರೀಯ ಪ್ರಯೋಗಾಲಯದಲ್ಲಿ ಮತ್ತು ಉಳಿದವುಗಳನ್ನು ರಾಜ್ಯಗಳ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಪಾಕ್‌ ಗಡಿ ಮೇಲೆ ತಾಲಿಬಾನ್‌ ಉಗ್ರ ದಾಳಿ: 20 ಯೋಧರ ಹತ್ಯೆ

ಕಾಬೂಲ್‌: ತನ್ನ ನೆಲದ ಮೇಲೆ ವಾಯು ದಾಳಿ ನಡೆಸಿ 46 ಮಂದಿ ಸಾವಿಗೆ ಕಾರಣವಾದ ಪಾಕಿಸ್ತಾನದ ವಿರುದ್ಧ ಇದೀಗ ಅಫ್ಘಾನಿಸ್ತಾನದಲ್ಲಿ ಆಡಳಿತದಲ್ಲಿರುವ ತಾಲಿಬಾನ್ ಸರ್ಕಾರ ತಿರುಗಿಬಿದ್ದಿದೆ. ಗಡಿಯಲ್ಲಿನ ಪಾಕ್‌ ಸೇನೆ ಗುರಿಯಾಗಿಸಿ ಆಫ್ಘನ್‌ ಸೇನೆ ಶುಕ್ರವಾರ ಭಾರೀ ದಾಳಿ ನಡೆಸಿದ್ದು ಇದರಲ್ಲಿ 20ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ತೆಹ್ರೀಕ್‌ ಎ ತಾಲಿಬಾನ್‌ ಪಾಕಿಸ್ತಾನ್‌ ಉಗ್ರ ಸಂಘಟನೆ ಗುರಿಯಾಗಿಸಿ ಪಾಕ್‌ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ 46 ಜನರು ಸಾವನ್ನಪ್ಪಿದ್ದರು. ಇದನ್ನು ಖಂಡಿಸಿದ್ದ ತಾಲಿಬಾನ್‌ ಸರ್ಕಾರಕ್ಕೆ ಇದಕ್ಕೆ ಪ್ರತೀಕಾರ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.‘ದೇಶದ ಆಗ್ನೇಯ ಭಾಗದಲ್ಲಿ ನಾವು ದಾಳಿ ಮಾಡಿದ್ದೇವೆ. ಇವು ಅಫ್ಘಾನಿಸ್ತಾನದ ಮೇಲಿನ ಪಾಕಿಸ್ದಾನದ ದಾಳಿಗೆ ವೇದಿಕೆ ಒದಗಿಸಿದ ಮತ್ತು ನೆರವು ನೀಡಿದ ದುಷ್ಟಶಕ್ತಿಗಳು ಮತ್ತು ಬೆಂಬಲಿಗರ ಅಡಗುತಾಣಗಳು ಮತ್ತು ಕೇಂದ್ರಗಳು’ ಎಂದು ಆಫ್ಘನ್‌ ರಕ್ಷಣಾ ಇಲಾಖೆ ಹೇಳಿದೆ.

ಬ್ರಹ್ಮಪುತ್ರ ಅಣೆಕಟ್ಟಿನಿಂದ ಭಾರತ, ಬಾಂಗ್ಲಾ ದೇಶಕ್ಕೆತೊಂದರೆಯಿಲ್ಲ: ಚೀನಾ

ಬೀಜಿಂಗ್‌: ಅರುಣಾಚಲ ಪ್ರದೇಶದ ಗಡಿಯ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಯಿಂದ ಯಾರಿಗೂ ತೊಂದರೆಯಾಗದು ಎಂದು ಚೀನಾ ಸರ್ಕಾರ ಹೇಳಿದೆ. ಈ ಮೂಲಕ ಯೋಜನೆ ಕುರಿತ ಭಾರತ ಮತ್ತು ಬಾಂಗ್ಲಾದೇಶಗಳ ಕಳವಳ ನಿವಾರಿಸುವ ಪ್ರಯತ್ನ ಮಾಡಿದೆ. ‘ಹಸಿರು ಇಂಧನ ಬಳಕೆ ನಿಟ್ಟಿನಲ್ಲಿ ಯಾರ್ಲುಂಗ್‌ ಜಾಂಗ್‌ಪೋ (ಬ್ರಹ್ಮಪುತ್ರ ನದಿ) ಮೇಲೆ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಹಲವು ಆಯಾಮಗಳಲ್ಲಿ ಸಿದ್ಧತೆ ಮತ್ತು ಅಧ್ಯಯನ ನಡೆದಿದೆ. ಇದರಿಂದ ನದಿ ಪಾತ್ರದ ಭಾರತ ಮತ್ತು ಬಾಂಗ್ಲಾದೇಶಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ಆದರೆ ಅದಕ್ಕೆ ಭದ್ರತಾ ಕ್ರಮವನ್ನು ತೆಗೆದುಕೊಳ್ಳಲು ಚೀನಾ ಸಹಕರಿಸಲಿದೆ ಎಂದು ಯೋಜನೆಯನ್ನು ಚೀನಾ ಸಮರ್ಥಿಸಿಕೊಂಡಿದೆ.

ಇ.ಡಿ. ಅಧಿಕಾರಿ ಮನೆ ಮೇಲೇ ಸಿಬಿಐ ದಾಳಿ, ₹1 ಕೋಟಿ ಪತ್ತೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಯ ಮನೆ ಮೇಲೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಈ ದಾಳಿ ವೇಳೆ ಇ.ಡಿ. ಅಧಿಕಾರಿಯ ಮನೆಯಲ್ಲಿ 1 ಕೋಟಿ ರು.ಗೂ ಅಧಿಕ ನಗದು ಪತ್ತೆಯಾಗಿದೆ.

ದಾಳಿ ಏಕೆ?:ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ಚಂಡೀಗಢ ಉದ್ಯಮಿಯ ಬಳಿ, ಇ.ಡಿ. ಅಧಿಕಾರಿ ಮತ್ತು ಆತನ ಸೋದರ 55 ಲಕ್ಷ ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಉದ್ಯಮಿ ಸಿಬಿಐಗೆ ದೂರು ನೀಡಿದ್ದರು. ಇದರ ಬೆನ್ನತ್ತಿದ್ದ ಸಿಬಿಐ, ಉದ್ಯಮಿಯಿಂದ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ವಶಕ್ಕೆ ಪಡೆಯುವ ಯೋಜನೆ ರೂಪಿಸಿತ್ತು. ಆದರೆ ಯೋಜನೆ ವಿಫಲವಾಗಿ ಹಣದೊಂದಿಗೆ ಇ.ಡಿ. ಅಧಿಕಾರಿ ಪರಾರಿಯಾಗಿದ್ದ. ಶನಿವಾರ ಇ.ಡಿ.ಅಧಿಕಾರಿಯ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ 55 ಲಕ್ಷ ರು. ಲಂಚದ ಹಣ ಸೇರಿ 1 ಕೋಟಿ ರು. ನಗದು ವಶಪಡಿಸಿಕೊಂಡಿದೆ. ಜೊತೆಗೆ ಇ.ಡಿ.ಅಧಿಕಾರಿ ಸೋದರ ವಿಕಾಸ್‌ ದೀಪ್‌ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.