ಅಯೋಧ್ಯೆಯಲ್ಲಿ ಕಳ್ಳರ ಕಾಟ : ₹50 ಲಕ್ಷ ಮೌಲ್ಯದ 3800 ಬಿದಿರಿನ ಬೀದಿ ದೀಪ, 36 ಪ್ರಾಜೆಕ್ಟರ್‌ ದೀಪ ಕಳವು

| Published : Aug 15 2024, 01:51 AM IST / Updated: Aug 15 2024, 04:14 AM IST

ಸಾರಾಂಶ

ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಕಳ್ಳರ ಕಾಟ ಆರಂಭವಾಗಿದ್ದು, 50 ಲಕ್ಷ ರು.ಗೂ ಹೆಚ್ಚಿನ ಬಿದಿರಿನ ಬೀದಿ ದೀಪಗಳು ಹಾಗೂ 36 ಪ್ರಾಜೆಕ್ಟರ್‌ ದೀಪಗಳು ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ದೀಪ ಅಳವಡಿಸಿದ್ದ ಕಂಪನಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

 ಅಯೋಧ್ಯೆ :  ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಕಳ್ಳರ ಕಾಟ ಆರಂಭವಾಗಿದ್ದು, 50 ಲಕ್ಷ ರು.ಗೂ ಹೆಚ್ಚಿನ ಬಿದಿರಿನ ಬೀದಿ ದೀಪಗಳು ಹಾಗೂ 36 ಪ್ರಾಜೆಕ್ಟರ್‌ ದೀಪಗಳು ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ದೀಪ ಅಳವಡಿಸಿದ್ದ ಕಂಪನಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಮ ಮಂದಿರ ನಿರ್ಮಾಣದ ವೇಳೆ ಇಲ್ಲಿನ ರಾಮಪಥ ಹಾಗೂ ಭಕ್ತಿ ಪಥಗಳನ್ನು 6400 ಬಿದಿರಿನ ಬೀದಿ ದೀಪಗಳು (ಬಿದಿರಿನ ಬುಟ್ಟಿಯಲ್ಲಿ ಬಲ್ಬ್‌ ಹಾಕಿ ಇರಿಸುವ ಅಲಂಕಾರಕ ದೀಪ) ಹಾಗೂ 96 ಪ್ರಾಜೆಕ್ಟರ್‌ ದೀಪಗಳನ್ನು ಅಳವಡಿಸಲಾಗಿತ್ತು. ಮಾ.19ರವರೆಗೂ ಈ ದೀಪಗಳು ಎಂದಿನಂತೆಯೇ ಇದ್ದವು. ಆದರೆ ಮೇ 9ರಂದು ನಡೆದ ಪರಿಶೀಲನೆ ವೇಳೆ ಇವುಗಳಲ್ಲಿ 3800 ಬಿದಿರಿನ ದೀಪಗಳು ಮತ್ತು 36 ಪ್ರಾಜೆಕ್ಟರ್‌ ದೀಪಗಳು ಕಾಣೆಯಾಗಿವೆ ಎಂದು ದೀಪ ಅಳವಡಿಸಿದ್ದ ಯಶ್‌ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ಶೇಖರ್‌ ಶರ್ಮಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಮೇ ತಿಂಗಳಲ್ಲಿಯೇ ಕಳವಾಗಿದ್ದು ಗೊತ್ತಿದ್ದರೂ ಆಗಸ್ಟ್‌ನಲ್ಲಿ ದೂರು ನೀಡಿದ್ದೇಕೆ ಎಂಬ ಪ್ರಶ್ನೆಯೂ ಉದ್ಧವಿಸಿದೆ.

ರಾಮ ಮಂದಿರ ನಿರ್ಮಾಣದ ವೇಳೆ ಅಯೋಧ್ಯೆಯನ್ನು ಅಲಂಕರಿಸುವ ಸಲುವಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಬೀದಿ ದೀಪಗಳ ಅಳವಡಿಕೆಗೆ ಯಶ್‌ ಕಂಪನಿಗೆ ಗುತ್ತಿಗೆ ನೀಡಿತ್ತು. ಅದರನ್ವಯ ಯಶ್‌ ಎಂಟರ್‌ಪ್ರೈಸಸ್‌ ಬೀದಿ ದೀಪ ಅಳವಡಿಸಿತ್ತು.