ಸಾರಾಂಶ
ಅಯೋಧ್ಯೆಯ ರೈಲು ನಿಲ್ದಾಣವನ್ನು ಅಯೋಧ್ಯಾ ಧಾಮ್ ಎಂದು ಬದಲಿಸಲಾಗಿದ್ದು, ನವೀಕೃತ ರೈಲು ನಿಲ್ದಾಣವನ್ನು ನರೇಂದ್ರ ಮೋದಿ ಡಿ.30ರಂದು ಉದ್ಘಾಟಿಸಲಿದ್ದಾರೆ.
ಅಯೋಧ್ಯೆ: ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಇಲ್ಲಿನ ನವೀಕೃತ ರೈಲು ನಿಲ್ದಾಣದ ಹೆಸರನ್ನು ಅಯೋಧ್ಯಾ ಧಾಮ ಜಂಕ್ಷನ್ ಎಂದು ಬದಲಿಸಲಾಗಿದೆ. ಈ ನವೀಕೃತ ರೈಲು ನಿಲ್ದಾಣವನ್ನು ಡಿ.30ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ನಿಲ್ದಾಣದಲ್ಲಿ 1 ಲಕ್ಷ ಜನರ ಆಗಮನ ನಿರ್ವಹಿಸುವ ರೀತಿ 430 ಕೋಟಿ ರು.ಗಳಲ್ಲಿ ಉನ್ನತೀಕರಿಸಲಾಗುತ್ತಿದೆ.
ಅಯೋಧ್ಯೆ ತುಂಬೆಲ್ಲಾ ರಾಮಜಪರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಅಯೋಧ್ಯೆ ತುಂಬೆಲ್ಲಾ ರಾಮನಾಮ ಜಪ ಜೋರಾಗಿದೆ. ನಗರದ ಬಹುತೇಕ ಸ್ಥಳಗಳಲ್ಲಿ ರಾಮಮಂದಿರ ಮತ್ತು ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ, ನವೀಕೃತ ರೈಲ್ವೆ ನಿಲ್ದಾಣದ ದೊಡ್ಡದೊಡ್ಡ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.ಈ ಪೋಸ್ಟರ್‌ಗಳಲ್ಲಿ ಅಯೋಧ್ಯೆಯು ‘ಗೌರವ, ಧರ್ಮ ಮತ್ತು ಸಂಸ್ಕೃತಿ’ಯ ನಗರ ಎಂದು ಬರೆಯಲಾಗಿದೆ. ಇನ್ನು ಕೆಲವು ಪೋಸ್ಟರ್‌ಗಳಲ್ಲಿ ‘ಗೌರವ, ಧರ್ಮ ಮತ್ತು ಸಂಸ್ಕೃತಿಯ ನಗರ ಅಯೋಧ್ಯೆಗೆ ಆಗಮಿಸುವ ಎಲ್ಲ ಸಾಧುಗಳು, ಗಣ್ಯರು, ಭಕ್ತರು, ಪ್ರವಾಸಿಗರು ಮತ್ತು ನಾಗರಿಕರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಪ್ರದರ್ಶಿಸಲಾಗಿದೆ.ಜೊತೆಗೆ ನಗರದ ಹಳೆಯ ಮತ್ತು ನೂತನ ರೈಲ್ವೆ ಕಟ್ಟಡಗಳಿಗೆ ಗುಲಾಬಿ ಬಣ್ಣ ಬಳಿಯಲಾಗಿದೆ. ಅನೇಕ ಪ್ರವಾಸಿಗರು, ಭದ್ರತಾ ಸಿಬ್ಬಂದಿ ಬೃಹತ್ ಪೋಸ್ಟರ್‌ಗಳು ಮತ್ತು ರೈಲ್ವೆ ನಿಲ್ದಾಣದ ಬಳಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆಗೆತೆರಳೋದು ಬೇಡ: ಕೇರಳಕಾಂಗ್ರೆಸ್ ನಾಯಕರ ಆಗ್ರಹಮುಂಬರುವ ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಬಹಿಷ್ಕರಿಸುವಂತೆ ಕೇರಳ ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ. ಆದರೆ ಈ ವಿಷಯದ ಇದೀಗ ಪಕ್ಷದಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.ಕಾರ್ಯಕ್ರಮದಿಂದ ದೂರ ಉಳಿಯುವಂತೆ ಸ್ಥಳೀಯ ಮುಸ್ಲಿಂ ಸಂಘಟನೆಗಳು ಕಾಂಗ್ರೆಸ್ ಮೇಲೆ ತೀವ್ರ ಒತ್ತಡ ಹೇರಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ದೂರ ಉಳಿಯುವಂತೆ ಕಾಂಗ್ರೆಸ್ ಸಂಸದರ ಕೆ. ಮುರಳೀಧರನ್ ದೆಹಲಿ ನಾಯಕರಿಗೆ ಪತ್ರ ಬರೆದಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ‘ಇದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರು ನಮ್ಮನ್ನು ಕೇಳಿದರೆ ಮಾತ್ರ ಅಭಿಪ್ರಾಯ ತಿಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ನಗರದ ಸಂಸದ ಶಶಿ ತರೂರ್ ತಟಸ್ಥ ಧೋರಣೆಯನ್ನು ತಳೆದಿದ್ದು, ‘ನಮ್ಮ ಪಕ್ಷ ಹಿಂದುತ್ವವನ್ನು ಪ್ರತಿಪಾದಿಸುತ್ತದೆಯೇ ಹೊರತು ಹಿಂದೂ ಧರ್ಮವನ್ನಲ್ಲ. ಆದ್ದರಿಂದ ನಾವು ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ಕೊಂಚ ಸಮಯ ಬೇಕು’ ಎಂಬುದಾಗಿ ತಿಳಿಸಿದ್ದಾರೆ.ಕೇರಳದ ಮುಸ್ಲಿಂ ಸುನ್ನಿ ಮಂಡಳಿಯ ಮುಖವಾಣಿ ‘ಸುಪ್ರಭಾತ’ದಲ್ಲಿ ಕಾಂಗ್ರೆಸ್ ಪಕ್ಷವು ರಾಮಮಂದಿರ ಉದ್ಘಾಟನೆಗೆ ತೆರಳುವ ಕುರಿತು ಒಲವು ತೋರಿದೆ ಎಂಬ ಕಾರಣಕ್ಕೆ ಕಿಡಿಕಾರಲಾಗಿತ್ತು. ಅದರ ಬೆನ್ನಲ್ಲೇ ಪಕ್ಷದಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.