ಸಾರಾಂಶ
ಅಯೋಧ್ಯೆ: ಅಯೋಧ್ಯೆ ಬಾಲರಾಮ ದರ್ಶನಕ್ಕಾಗಿ ಲಕ್ಷಾಂತರ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಅನುಕೂಲಕ್ಕಾಗಿ ‘ರಾಮದರ್ಶನ’ದ ಅವಧಿಯನ್ನು ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಲಾಗಿದೆ.
ರಾಮಮಂದಿರವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಿದ 2 ದಿನಗಳಲ್ಲಿ ಸುಮಾರು 8 ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೇ ಮಂದಿರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಈ ಮೊದಲು ರಾಮಮಂದಿರದ ದರ್ಶನದ ಅವಧಿಯನ್ನು ಮುಂಜಾನೆ 7 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ನಿಗದಿಪಡಿಸಲಾಗಿತ್ತು.
ಇದರಲ್ಲಿ ಮಧ್ಯಾಹ್ನ 2 ಗಂಟೆಗಳ ವಿರಾಮ ಸಹ ನೀಡಲಾಗಿತ್ತು. ಬುಧವಾರ ಮಧ್ಯಾಹ್ನದ ವಿರಾಮದ ಅವಧಿಯನ್ನು 1 ಗಂಟೆ ಕಡಿತಗೊಳಿಸಲಾಗಿತ್ತು. ಗುರುವಾರ ಈ ಅವಧಿಯನ್ನು ಕೇವಲ 15 ನಿಮಿಷಗಳಿಗೆ ಕಡಿತಗೊಳಿಸಲಾಗಿದೆ.
ಮಂದಿರವನ್ನು ಸಂಪರ್ಕಿಸುವ ಬಸ್ತಿ, ಗೊಂಡಾ, ಅಂಬೇಡ್ಕರ್‌ನಗರ, ಬಾರಾಬಂಕಿ, ಸುಲ್ತಾನ್‌ಪುರ ಮತ್ತು ಅಮೇಥಿ ರಸ್ತೆಗಳಲ್ಲಿ ರ್‍ಯಾಪಿಡ್ ಆ್ಯಕ್ಷನ್ ಫೋರ್ಸ್ ಮತ್ತು ಕೇಂದ್ರ ಸಶಸ್ತ್ರ ಪಡೆಯನ್ನು ನೇಮಕ ಮಾಡಲಾಗಿದ್ದು, ಭಕ್ತರಿಗಾಗಿ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.