ಶ್ರೀರಾಮನ ಅಯೋಧ್ಯೆ ಈಗ ಝಗಮಗ

| Published : Jan 21 2024, 01:34 AM IST / Updated: Jan 21 2024, 07:26 AM IST

ayodhya

ಸಾರಾಂಶ

ಸೋಮವಾರ ಉದ್ಘಾಟನೆಯಾಗುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರವು ರಾಶಿ ರಾಶಿ ಹೂವುಗಳು ಮತ್ತು ಲಕ್ಷಾಂತರ ದೀಪಗಳಿಂದ ಭಾರೀ ಸೊಗಸಾಗಿ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಮಂದಿರವಷ್ಟೇ ಅಲ್ಲದೇ ಇಡೀ ಅಯೋಧ್ಯೆ ನಗರಿ ನೋಡುಗರ ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿದೆ.

ಅಯೋಧ್ಯೆ: ಸೋಮವಾರ ಉದ್ಘಾಟನೆಯಾಗುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರವು ರಾಶಿ ರಾಶಿ ಹೂವುಗಳು ಮತ್ತು ಲಕ್ಷಾಂತರ ದೀಪಗಳಿಂದ ಭಾರೀ ಸೊಗಸಾಗಿ ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಮಂದಿರವಷ್ಟೇ ಅಲ್ಲದೇ ಇಡೀ ಅಯೋಧ್ಯೆ ನಗರಿ ನೋಡುಗರ ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿದೆ.

ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧಿಕಾರಿಗಳ ನೇತೃತ್ವದಲ್ಲಿ ಮಂದಿರದ ಪುಷ್ಪಾಲಂಕಾರ ಮತ್ತು ದೀಪಾಲಂಕಾರಕ್ಕಾಗಿ ಅನೇಕ ತಂಡಗಳನ್ನು ರಚಿಸಲಾಗಿದೆ. ಇನ್ನು ಗರ್ಭಗುಡಿಯಲ್ಲಿ ಸಾಂಪ್ರದಾಯಿಕ ಹಣತೆಗಳಿಂದ ಅಲಂಕಾರ ಮಾಡಲಾಗಿದ್ದು, ದೇವಾಲಯದ ಇತರ ಭಾಗಗಳಲ್ಲಿ ಬಣ್ಣ ಬಣ್ಣದ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ಲೈಟ್‌ಗಳನ್ನು ಸಂಜೆ ಬಳಿಕವಷ್ಟೇ ಆನ್‌ ಮಾಡಲಾಗುತ್ತದೆ.

‘ದೇವಾಲಯವನ್ನು ವಿಶೇಷವಾದ ಸುಂದರ ಹೂವುಗಳಿಂದ ಅಲಂಕರಿಸಲಾಗಿದೆ. ಇವೆಲ್ಲವೂ ನೈಸರ್ಗಿಕ ಹೂವುಗಳು. ಚಳಿಗಾಲ ಇರುವುದರಿಂದ ಹೂವುಗಳು ಬೇಗನೆ ಬಾಡುವುದಿಲ್ಲ. ಈ ರೋಮಾಂಚಕ ಹೂವುಗಳ ಪರಿಮಳ ಮತ್ತು ಸೌಂದರ್ಯದ ಆಕರ್ಷಣೆಯು ದೇವಾಲಯಕ್ಕೆ ದೈವತ್ವದ ಮತ್ತೊಂದು ಮುದ್ರೆ ಹಾಕಿದೆ’ ಎಂದು ಹೇಳಿದೆ.

ದೆಹಲಿಯಿಂದ ಅಯೋಧ್ಯೆಗೆ ಹೂವು: ರಾಮ ಮಂದಿರವನ್ನು ಅಲಂಕರಿಸಲು ದೇಶದ ಅತಿ ದೊಡ್ಡ ಹೂವಿನ ಮಾರುಟ್ಟೆಯಾಗಿರುವ ಗಾಜಿಪುರದಿಂದ ಕಳೆದ 3- 4 ದಿನಗಳಿಂದ ನಿರಂತರವಾಗಿ 4 ಕಂಟೇನರ್‌ಗಳಲ್ಲಿ ಹೂವುಗಳನ್ನು ತರಲಾಗುತ್ತಿದೆ. 

ಅಲ್ಲದೇ ಗಾಜಿಪುರದ ಹೂವಿನ ವ್ಯಾಪಾರಿಗಳೊಂದಿಗೆ ಮಂದಿರ ಟ್ರಸ್ಟ್‌ ಹೂವುಗಳ ಪೂರೈಕೆಗೆ ಮುಂಗಡವಾಗಿಯೇ ಒಪ್ಪಂದ ಮಾಡಿಕೊಂಡಿದೆ. ಹೂವಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಬೆಂಗಳೂರು, ಉಜ್ಜಯಿನಿ, ಕೋಲ್ಕತಾ, ಇಂದೋರ್‌, ಉತ್ತರಾಖಂಡ ಮತ್ತು ಹರ್‍ಯಾಣ ಸೇರಿದಂತೆ ದೇಶದ ಇತರ ಭಾಗಗಳಿಂದ ಗಾಜಿಪುರಕ್ಕೆ ಹೂವುಗಳ ರಾಶಿಯೇ ಹರಿದು ಬರುತ್ತಿದೆ. 

ಅಲ್ಲದೇ ಥಾಯ್ಲೆಂಡ್‌ ಮತ್ತು ಹಾಲೆಂಡ್‌ ದೇಶಗಳಿಂದಲೂ ಹೂವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 

ಮಂದಿರ ಅಲಂಕಾರಕ್ಕೆ ಯಾವ ಹೂ: ಕೋಲ್ಕತಾ ಕೌರಿ, ಗುಲಾಬಿ, ಟ್ಯುಬೆರೋಸ್, ಕೋಲ್ಕತಾ ಮಾರಿಗೋಲ್ಡ್‌, ಲಿಲ್ಲಿ, ಆರ್ಕಿಡ್‌, ಕರೋನೆಷನ್‌, ಗೆರ್ವೆರಾ ಮತ್ತು ಅಂಥೋರಿಯಂ ಹೂವುಗಳನ್ನು ಹೆಚ್ಚಾಗಿ ಅಯೋಧ್ಯಾ ಮಂದಿರ ಅಲಂಕಾರಕ್ಕೆ ಬಳಸಲಾಗಿದೆ. 

ಅದಾಗ್ಯೂ ಸದ್ಯ ಮಾರುಕಟ್ಟೆಯಲ್ಲಿ 89 ರಿಂದ 90 ಬಗೆಯ ಹೂವುಗಳ ಮಾರಾಟ ನಡೆಯುತ್ತಿದ್ದು, ಇದಷ್ಟೇ ಅಲ್ಲದೇ ಹಲವಾರು ಬಗೆಯ ಹೂವುಗಳನ್ನು ಗಾಜಿಪುರದಿಂದ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.

ಕರ್ನಾಟಕ ದಂಪತಿಗೂ ಪ್ರಾಣ ಪ್ರತಿಷ್ಠಾಪನೆ ಯಜಮಾನತ್ವ!
ಪಿಟಿಐ ಅಯೋಧ್ಯೆ/ಕಲಬುರಗಿ
ಸೋಮವಾರ ನಡೆಯಲಿರುವ ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಮುಖ್ಯ ಯಜಮಾನತ್ವ’ ವಹಿಸಲಿದ್ದರೆ, ಅವರ ಜತೆಗೆ ಪೂಜೆಯ ಯಜಮಾನತ್ವ ವಹಿಸಲು ದೇಶದ 4 ದಿಕ್ಕುಗಳಿಂದ 14 ದಂಪತಿಗಳನ್ನು ಆಯ್ಕೆ ಮಾಡಲಾಗಿದೆ. 

ಇದರಲ್ಲಿ ಕರ್ನಾಟಕದ ಕಲಬುರಗಿಯ ವಿಎಚ್‌ಪಿ ಮುಖಂಡ ಲಿಂಗರಾಜ ಬಸವರಾಜ ಅಪ್ಪ ದಂಪತಿ ಕೂಡ ಇದ್ದಾರೆ ಎಂಬುದು ವಿಶೇಷ.

ಶನಿವಾರ ಈ ವಿಷಯ ತಿಳಿಸಿದ ಆರೆಸ್ಸೆಸ್‌ ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್‌, ‘ಪ್ರಾಣಪ್ರತಿಷ್ಠಾಪನೆಗೆ ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಿಂದ 14 ದಂಪತಿಗಳನ್ನು ಯಜಮಾನತ್ವ ವಹಿಸಲು ಆಯ್ಕೆ ಮಾಡಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಮಗೆ ತಿಳಿಸಿದೆ’ ಎಂದರು.

‘ಈ ಪೈಕಿ ಕರ್ನಾಟಕದ ವಿಎಚ್‌ಪಿ ಉತ್ತರ ಪ್ರಾಂತದ ಪ್ರಮುಖ್‌ ಲಿಂಗರಾಜ ಬಸವರಾಜ ದಂಪತಿ ಆಯ್ಕೆಯಾಗಿದ್ದಾರೆ ಹಾಗೂ ದೇಶದ ವಿವಿಧ ಭಾಗಗಳಿಂದ ಇನ್ನೂ 13 ದಂಪತಿಯನ್ನು ಆಯ್ಕೆ ಮಾಡಲಾಗಿದೆ. 

ಇವರ ಹೆಸರಿನಲ್ಲಿ ಅಂದು ಸಂಕಲ್ಪ ಮಾಡಲಾಗುತ್ತದೆ ಹಾಗೂ ವಿಧ ಪೂಜೆಗಳನ್ನು ಈ ದಂಪತಿಯ ಮೂಲಕ ಪುರೋಹಿತರು ನಡೆಸಲಿದ್ದಾರೆ’ ಎಂದರು.

‘ರಾಮಮಂದಿರಕ್ಕಾಗಿ ದೇಶದ ಎಲ್ಲ ಭಾಗಗಳ ಜನರು ಹೋರಾಡಿದರು. ಇದರ ದ್ಯೋತಕವಾಗಿ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ನೀಡಲು ಎಲ್ಲ ಪ್ರದೇಶಗಳಿಗೆ ಪ್ರಾತಿನಿಧಿಕವಾಗಿ ಜಯಮಾನತ್ವ ನೀಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ರಾಮನಿಗೆ ನಿನ್ನೆ ಪುಷ್ಪಾಧಿವಾಸ:
ಈ ನಡುವೆ, ಶನಿವಾರ ರಾಮಲಲ್ಲಾ ಮೂರ್ತಿಗೆ ಸಕ್ಕರೆ ನೈವೇದ್ಯ ಮಾಡಿ, ದೇಶದ ವಿವಿಧ ಭಾಗಗಳಿಂದ ತಂದ ಪುಷ್ಪಗಳಿಂದ ಅರ್ಜನೆ ಮಾಡಲಾಯಿತು. ಇದಕ್ಕೆ ಪುಷ್ಪಾಧಿವಾಸ ಪೂಜೆ ಎನ್ನುತ್ತಾರೆ.
ಇಂದು ಏನು?
ಭಾನುವಾರ ಮಧ್ಯಾಧಿವಾಸ ಹಾಗೂ ಶೈಯಾಧಿವಾಸ ಪೂಜೆಗಳನ್ನು ರಾಮಮಲ್ಲಾ ಮಂದಿರದಲ್ಲಿ ನಡೆಸಲಾಗುತ್ತದೆ.

ಶರಣಬಸವೇಶ್ವರ ದಾಸೋಹ ಮನೆತನದವರು: ಲಿಂಗರಾಜ ಬಸವರಾಜ ಅಪ್ಪ ಅವರು ಕಲಬುರಗಿಯ ಶರಣಬಸವೇಶ್ವರ ದಾಸೋಹ ಮನೆತನದವರು. ಉದ್ದಿಮೆದಾರರಾಗಿ ಬದುಕು ಕಟ್ಟಿಕೊಂಡ ಇವರು, ಪ್ರಗತಿಪರ ಕೃಷಿಕರಾಗಿಯೂ ಹೆಸರು ಮಾಡಿದವರು. 

ಜತೆಗೆ ವಿಎಚ್‌ಪಿ ಉತ್ತರ ಪ್ರಾಂತದ ಪ್ರಮಖರಾಗಿಯೂ ಕೆಲಸ ಮಾಡುತ್ತಿದ್ದಾರೆ.ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ಬಂದ ಕರೆಯಂತೆ ಲಿಂಗರಾಜ ಬಸವರಾಜ ಅಪ್ಪ ಅವರು ಪರಿವಾರ ಸಮೇತರಾಗಿ ಕಲಬುರಗಿಯಿಂದ ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ.

ತಮಗೆ ಸಿಕ್ಕಿರುವ ಅಪರೂಪದ ಅವಕಾಶದ ಕುರಿತು ಕನ್ನಡಪ್ರಭದ ಜತೆಗೆ ಸಂತಸ ಹಂಚಿಕೊಂಡ ಅವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಬಂಧ ಅಯೋಧ್ಯೆಯಲ್ಲಿ ನಡೆಯಲಿರುವ ವಿಶೇಷ ಧಾರ್ಮಿಕ ವಿಧಿ-ವಿಧಾನಗಳನ್ನು ಕಣ್ತುಂಬಿಕೊಳ್ಳುವ ಸುಯೋಗ ನನಗೆ ಒಲಿದು ಬಂದಿರೋದು ಸಂತಸ ತಂದಿದೆ. 

ಇದಕ್ಕೆಲ್ಲ ನಮ್ಮ ತಂದೆಯವರಾದ ಬಸವರಾಜ ಅಪ್ಪ ಹಾಗೂ ಪೂರ್ವಜರ ಆಶೀರ್ವಾದ ಕಾರಣ ಎಂದರು.ನಮ್ಮ ತಂದೆ ಬಸವರಾಜಪ್ಪ ಅಪ್ಪ ಅವರು ವಿಶ್ವ ಹಿಂದು ಪರಿಷತ್‌ ಉತ್ತರ ಪ್ರಾಂತ ಪ್ರಮುಖರಾಗಿದ್ದರು, ನಮ್ಮದು ಹಾಸೋಹ ಮನೆತನ, ಪರರ ಏಳಿಗೆಯಲ್ಲಿ ನಮ್ಮ ಏಳಿಗೆ ಕಂಡ ಮನೆತನ. 

ಹೀಗಾಗಿ ಇದೆಲ್ಲದರಿಂದ ಸಂಗ್ರಹವಾಗಿರುವ ಪುಣ್ಯದಿಂದಲೇ ತಮಗಿಂದು ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಗುವ ಸುವರ್ಣ ಅವಕಾಶ ಒದಗಿ ಬಂದಿದೆ ಎಂದು ತಿಳಿಸಿದರು.

ಇಡೀ ದೇಶಕ್ಕೇ ಇಂದು ಧಾರ್ಮಿಕತೆ ಬೇಕಿದೆ. ಧಾರ್ಮಿಕ ಮನೋಭಾವದಿಂದ ಮಾತ್ರ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ. ಹೀಗಾಗಿ ನಾನು ಇಂತಹ ಧಾರ್ಮಿಕತೆ ಸದಾಕಾಲ ದೇಶದ ಉದ್ದಗಲ ಚಿಗುರುತ್ತಿರಬೇಕು ಎಂದು ಬಯಸುತ್ತೇನೆ. ಶ್ರೀ ರಾಮದೇವರಲ್ಲಿ ಅದನ್ನೇ ಪ್ರಾರ್ಥಿಸುತ್ತೇನೆ.