ಅಯೋಧ್ಯೆ ಪೂರ್ಣ ಕೇಸರಿಮಯ: ಎಲ್ಲೆಡೆ ಪೊಲೀಸ್‌ ಬಿಗಿಭದ್ರತೆ

| Published : Jan 22 2024, 02:16 AM IST / Updated: Jan 22 2024, 09:07 AM IST

ಸಾರಾಂಶ

ಇತ್ತೀಚಿನ ಶತಮಾನಗಳಲ್ಲೇ ಕಂಡುಕೇಳರಿಯದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯಾದಿಯಾಗಿ ರಾಜಕೀಯ, ಧಾರ್ಮಿಕ, ಉದ್ಯಮ, ಚಿತ್ರರಂಗ, ಕ್ರೀಡಾಪಟುಗಳು, ಸಾಮಾಜಿಕ ಕಾರ್ಯಕರ್ತರು, ವಿದೇಶಿ ಗಣ್ಯರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಪಿಟಿಐ ಅಯೋಧ್ಯೆ

ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಕ್ಷಣಗಣನೆ ನಡೆದಿರುವಾಗಲೇ ಅಯೋಧ್ಯೆಯ ಬೀದಿಗಳು ಕೇಸರಿ ಬಣ್ಣಕ್ಕೆ ತಿರುಗಿವೆ. 

ದೇವಾಲಯದ ಪಟ್ಟಣದಾದ್ಯಂತ ಸಣ್ಣ ಮತ್ತು ದೊಡ್ಡ ಕಟ್ಟಡಗಳ ಮೇಲೆ ಕೇಸರಿ ಧ್ವಜಗಳು ಹಾರಾಡುತ್ತಿವೆ.ಇತ್ತೀಚಿನ ಶತಮಾನಗಳಲ್ಲೇ ಕಂಡುಕೇಳರಿಯದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯಾದಿಯಾಗಿ ರಾಜಕೀಯ, ಧಾರ್ಮಿಕ, ಉದ್ಯಮ, ಚಿತ್ರರಂಗ, ಕ್ರೀಡಾಪಟುಗಳು, ಸಾಮಾಜಿಕ ಕಾರ್ಯಕರ್ತರು, ವಿದೇಶಿ ಗಣ್ಯರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಮತ್ತೊಂದೆಡೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ ಗಣ್ಯರ ಪೈಕಿ ಒಂದಷ್ಟು ಜನರು ಭಾನುವಾರವೇ ರಾಮನ ನಗರಿಗೆ ಆಗಮಿಸಿದ್ದರೆ, ಉಳಿದವರು ತವರು ರಾಜ್ಯಗಳಿಂದ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.

ಇಡೀ ನಗರ ಕೇಸರಿಮಯ:ಐತಿಹಾಸಿಕ ಸಮಾರಂಭದ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆ ನಗರಿ ದೀಪ, ಬಣ್ಣದ ಲೈಟ್‌ಗಳು, ಶೃಂಗಾರಗೊಂಡ ಗೋಡೆಗಳು, ಹೂವಿನ ಅಲಂಕಾರ, ಕೇಸರಿ ಬಾವುಟಗಳಿಂದ ಶೃಂಗಾರಗೊಂಡಿದೆ. 

ಇಡೀ ನಗರ ದೇಶ ವಿದೇಶಗಳ ಗಣ್ಯರು, ಭಕ್ತರ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ.ರಾಮಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಾಮಪಥ ಮತ್ತು ಧರ್ಮ ಪಥದಲ್ಲಿ, ಭಕ್ತರು ಕೇಸರಿ ಧ್ವಜಗಳನ್ನು ಬೀಸುತ್ತಾ ನಡೆದುಕೊಂಡು ಹೋಗುವುದು ಅಥವಾ ಕುದುರೆಯ ಮೇಲೆ ಹೋಗುವ ದೃಶ್ಯ ಸಾಮಾನ್ಯವಾಗಿದೆ. 

ಭಗವಾನ್ ರಾಮ, ಹೊಸ ರಾಮಮಂದಿರ ಮತ್ತು ಭಗವಾನ್ ಹನುಮಾನ್ ಚಿತ್ರಗಳನ್ನು ಹೊಂದಿರುವ ಧ್ವಜಗಳು ಭರ್ಜರಿ ಮಾರಾಟವಾಗುತ್ತಿದೆ.

ಲತಾ ಮಂಗೇಶ್ಕರ್ ಚೌಕ್‌ನ ಸಮೀಪವಿರುವ ರಾಮ್ ಪಥ್‌ನ ಎಲ್ಲಾ ಕಟ್ಟಡಗಳು ಮತ್ತು ಅಂಗಡಿಗಳು ವಿವಿಧ ಗಾತ್ರದ ಧ್ವಜಗಳಿಂದ ಅಲಂಕರಿಸಲ್ಪಟ್ಟಿವೆ. ನಗರದ ಒಳ ಬೀದಿಗಳಲ್ಲಿರುವ ಮನೆಗಳು, ಧರ್ಮಶಾಲೆಗಳು, ಮಠಗಳು, ಅಂಗಡಿಗಳು ಮತ್ತು ಹೋಟೆಲ್‌ಗಳು ಸಹ ತಮ್ಮ ಛಾವಣಿಯ ಮೇಲೆ ದೊಡ್ಡ ಕೇಸರಿ ಧ್ವಜಗಳು ರಾರಾಜಿಸುತ್ತಿವೆ.

ಅಯೋಧ್ಯೆಗೆ ಬರುವ ಜನರಿಗೆ ಸ್ಥಳೀಯರು ಉಚಿತವಾಗಿ ಕೇಸರಿ ಧ್ವಜ ವಿತರಿಸುತ್ತಿದ್ದಾರೆ. ಜನರು ಬೀದಿ ಬೀದಿಗಳಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಿದ್ದಾರೆ. ಅಯೋಧ್ಯೆಯ ಬೀದಿಗಳಲ್ಲಿ ಧ್ವನಿವರ್ಧಕಗಳನ್ನು ಹಾಕಲಾಗಿದ್ದು, ‘ರಾಮ್ ಆಯೇಂಗೆ’ ಮತ್ತು ‘ಅವಧ್ ಮೇ ರಾಮ್ ಆಯೇ ಹೈ’ ನಂತಹ ಹಾಡುಗಳಿಂದ ತುಂಬಿವೆ.

ಭಾರೀ ಭದ್ರತೆ: ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ನಗರಕ್ಕೆ 5 ಸ್ತರದ ಭದ್ರತೆ ಒದಗಿಸಲಾಗಿದೆ. ಪೊಲೀಸರು ರಸ್ತೆಗಳಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದಾರೆ. 

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಪೊಲೀಸರು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಮಂದಿರದ ಸನಿಹವೇ ಬೀಡು ಬಿಟ್ಟಿದ್ದಾರೆ.ನಗರದ ಪ್ರತಿಯೊಂದು ಪ್ರಮುಖ ಕ್ರಾಸಿಂಗ್‌ನಲ್ಲಿ ಮುಳ್ಳುತಂತಿಗಳನ್ನು ಜೋಡಿಸಲಾದ ಬ್ಯಾರಿಕೇಡ್‌ ಹಾಕಲಾಗಿದೆ.

ರಾಮಮಂದಿರ ಇರುವ ಪ್ರದೇಶ ಹಾಗೂ ಅದರ ಸುತ್ತಲಿನ ಪ್ರದೇಶಗಳನ್ನು ಕೆಂಪು ವಲಯ ಹಾಗೂ ಹಳದಿ ವಲಯ ಎಂದು ಗುರುತಿಸಲಾಗಿದ್ದು, ಅಲ್ಲಿ ಭಾರಿ ಭದ್ರತೆ ಹಾಕಲಾಗಿದೆ. 

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಹುಭಾಷಾ ಕೌಶಲ್ಯ ಹೊಂದಿರುವ ಪೊಲೀಸ್ ಸಿಬ್ಬಂದಿಯನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲಾಗಿದೆ.ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕೂಡ ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸಲಿವೆ. ಜನಸಂದಣಿ ನಿಯಂತ್ರಣಕ್ಕೆ ಡ್ರೋನ್‌ಗಳನ್ನೂ ಬಳಸಲು ತೀರ್ಮಾನಿಸಲಾಗಿದೆ.