ರಷ್ಯಾದ ಕ್ಷಿಪಣಿ ದಾಳಿಯ ಪರಿಣಾಮ ಅಜರ್‌ಬೈಜಾನ್‌ನ ವಿಮಾನ ದುರಂತ ? ನಾನಾ ವದಂತಿ ವರದಿ

| Published : Dec 27 2024, 12:46 AM IST / Updated: Dec 27 2024, 04:54 AM IST

ಸಾರಾಂಶ

38 ಜನರನ್ನು ಬಲಿ ಪಡೆದ ಅಜರ್‌ಬೈಜಾನ್‌ನ ವಿಮಾನ ದುರಂತದ ಕುರಿತು ಇದೀಗ ನಾನಾ ವದಂತಿಗಳು ಹಬ್ಬತೊಡಗಿದ್ದು, ರಷ್ಯಾದ ಕ್ಷಿಪಣಿ ದಾಳಿಯ ಪರಿಣಾಮ ವಿಮಾನಪತನ ಆಗಿರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ‘ದ ವಾಲ್‌ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ.  

ವಾಷಿಂಗ್ಟನ್‌: 38 ಜನರನ್ನು ಬಲಿ ಪಡೆದ ಅಜರ್‌ಬೈಜಾನ್‌ನ ವಿಮಾನ ದುರಂತದ ಕುರಿತು ಇದೀಗ ನಾನಾ ವದಂತಿಗಳು ಹಬ್ಬತೊಡಗಿದ್ದು, ರಷ್ಯಾದ ಕ್ಷಿಪಣಿ ದಾಳಿಯ ಪರಿಣಾಮ ವಿಮಾನಪತನ ಆಗಿರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ‘ದ ವಾಲ್‌ಸ್ಟ್ರೀಟ್‌ ಜರ್ನಲ್‌’ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ. ಇದರ ಜೊತೆಗೆ ಈ ಹಿಂದೆ ಅಂದಾಜಿಸಲಾಗಿದ್ದ ಹಕ್ಕಿಬಡಿತ ಮತ್ತು ಹವಾಮಾನ ವೈಪರೀತ್ಯದ ಕಾರಣಗಳೂ ಕೇಳಿಬಂದಿವೆ.

ಕ್ಷಿಪಣಿ ದಾಳಿ:

ವಿಮಾನ ಪತನ ನಡೆದ ದಿನ ಉಕ್ರೇನ್‌ ಮೇಲೆ ರಷ್ಯಾ 70ಕ್ಕೂ ಹೆಚ್ಚು ಕ್ಷಿಪಣಿ ಮತ್ತು 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿತ್ತು. ಹೀಗಾಗಿ ಸಂಘರ್ಷ ನಡೆಯುತ್ತಿದ್ದ ಪ್ರದೇಶದತ್ತಲೇ ವಿಮಾನ ತೆರಳುತ್ತಿದ್ದ ಕಾರಣ ಅದು ಉಕ್ರೇನ್‌ ಡ್ರೋನ್‌ ಇರಬಹುದು ಎಂದು ಊಹಿಸಿ ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯು ಕ್ಷಿಪಣಿ ಉಡ್ಡಯನ ಮಾಡಿರಬಹುದು. ಅದು ತಾಗಿ ವಿಮಾನ ಪತನಗೊಂಡಿರಬಹುದು ಎಂದು ವರದಿ ಹೇಳಿದೆ.

ಇದಕ್ಕೆ ಪೂರಕವಾಗಿ, ವಿಮಾನದ ಇಂಧನ ಟ್ಯಾಂಕ್‌ ಬಳಿ ದಾಳಿ ಗುರುತು ಕಾಣಿಸಿಕೊಂಡಿದೆ. ಇದು ಅಪಘಾತದಿಂದ ಸಂಭವಿಸಿದಂತೆ ಇಲ್ಲ ಎಂದು ವರದಿ ತಿಳಿಸಿದೆ. ಈ ಹಿಂದೆ 2014ರಲ್ಲಿ ಮಲೇಷ್ಯಾ ಮೂಲದ ವಿಮಾನವೊಂದು ನಿಗೂಢವಾಗಿ ಪತನಗೊಂಡು 230 ಜನರು ಸಾವನ್ನಪ್ಪಿದ್ದರು. ಆಗಲೂ ರಷ್ಯಾ ಕ್ಷಿಪಣಿ ದಾಳಿಯ ಶಂಕೆ ವ್ಯಕ್ತವಾಗಿತ್ತು. ಆದರೆ ಅದು ಖಚಿತಪಟ್ಟಿರಲಿಲ್ಲ.

ಆದರೆ ಈ ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅಜರ್‌ಬೈಜಾನ್‌ ಉಪಪ್ರಧಾನಿ ಕನಟ್‌ ಬೊಜುಂಬಯೇವ್‌ ನಿರಾಕರಿಸಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಪಘಾತಕ್ಕೂ ಕೆಲ ಕ್ಷಣಗಳ ಮುನ್ನ ವಿಮಾನ ತನ್ನ ಪಥ ಬದಲಿಸಿತ್ತು ಎಂದು ಪ್ರಾಥಮಿಕ ವರದಿ ತಿಳಿಸಿವೆ. ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ನಾವು ವಿಸ್ತೃತ ತನಿಖೆ ನಡೆಸಲಿದ್ದೇವೆ ಎಂದು ಹೇಳಿದೆ.

ಬುಧವಾರ ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ಹೊರಟಿದ್ದ ವಿಮಾನ ಕಜಕಿಸ್ತಾನದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 67 ಜನರ ಪೈಕಿ 38 ಜನರು ಸಾವನ್ನಪ್ಪಿದ್ದರು.