ಸಾರಾಂಶ
ಮಾಸ್ಕೋ: ಅಜರ್‌ಬೈಜಾನ್ ರಾಜಧಾನಿ ಬಾಕುವಿನಿಂದ ರಷ್ಯಾಕ್ಕೆ ಹೊರಟಿದ್ದ ವಿಮಾನವೊಂದು ಹಕ್ಕಿ ಡಿಕ್ಕಿಯ ಪರಿಣಾಮ ಪತನಗೊಂಡು 35 ಜನರು ಸಾವನ್ನಪ್ಪಿದ ಭೀಕರ ಘಟನೆ ಕಜಕಿಸ್ತಾನದ ಅಕ್ಟೌ ಎಂಬಲ್ಲಿ ಬುಧವಾರ ನಡೆದಿದೆ. 67 ಜನರಿದ್ದ ವಿಮಾನ ಅಪಘಾತದ ತೀವ್ರತೆಗೆ ಬೆಂಕಿ ಉಂಡೆಯಂತಾದರೂ, ಅದೃಷ್ಟವಶಾತ್ ವಿಮಾನದಲ್ಲಿ 32 ಜನರು ಬದುಕುಳಿದಿದ್ದಾರೆ.
ಬದುಕುಳಿದವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ.ಏನಾಯ್ತು?: ಅಜರ್‌ಬೈಜಾನ್‌ಗೆ ಸೇರಿದ ಎಂಬ್ರೇಯರ್ 190 ವಿಮಾನ 5 ಸಿಬ್ಬಂದಿ, 62 ಪ್ರಯಾಣಿಕರನ್ನು ಹೊತ್ತು ರಷ್ಯಾಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಪ್ರಯಾಣ ಬೆಳೆಸಿದ ಕೆಲ ಹೊತ್ತಿನಲ್ಲೇ ದೊಡ್ಡ ಹಕ್ಕಿ ಗುಂಪೊಂದು ವಿಮಾನಕ್ಕೆ ಅಪ್ಪಳಿಸಿದೆ. ಈ ವೇಳೆ ವಿಮಾನ ನಿಯಂತ್ರಣ ತಪ್ಪಿದೆ. ಈ ಹಿನ್ನೆಲೆಯಲ್ಲಿ ಚಾಲಕ, ಕಜಕಿಸ್ತಾನದ ಅಕ್ಟೌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದ್ದಾರೆ.
ಅನುಮತಿ ಸಿಕ್ಕ ಬಳಿಕ ಪೈಲಟ್, ವಿಮಾನದ ಇಂಧನ ಖಾಲಿ ಮಾಡುವ ಸಲುವಾಗಿ ಏರ್‌ಪೋರ್ಟ್‌ನ ಮೇಲೆ ಹಲವು ಸುತ್ತು ಹೊಡೆಸಿದ್ದಾನೆ. ಬಳಿಕ ಅದನ್ನು ನಿಧಾನವಾಗಿ ಇಳಿಸುವ ಪ್ರಯತ್ನ ಮಾಡಿದ್ದಾನಾದರೂ ಅದು ಆತನ ನಿಯಂತ್ರಣ ತಪ್ಪಿದೆ. ಜೊತೆಗೆ ವಿಮಾನದ ಎತ್ತರ ಏರಿಸುವ ಪ್ರಯತ್ನ ಮಾಡಿದರೂ ಅದು ಫಲ ಕೊಟ್ಟಿಲ್ಲ. ಹೀಗಾಗಿ ನಿಧಾನವಾಗಿ ಹಂತಹಂತವಾಗಿ ಇಳಿಯುವ ಬದಲು ವಿಮಾನ ಅತ್ಯಂತ ವೇಗವಾಗಿ ರನ್‌ವೇ ಬಂದು ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಿಮಾನದ ಇಬ್ಬರೂ ಪೈಲಟ್‌ಗಳು ಸೇರಿ 35 ಜನರು ಸಾವನ್ನಪ್ಪಿದ್ದಾರೆ.ಯಾವ ದೇಶದ ನಾಗರಿಕರು?:
ಅಪಘಾತಕ್ಕೊಳಗಾದ ವಿಮಾನದಲ್ಲಿ ಅಜರ್‌ಬೈಜಾನ್‌ನ 42, ರಷ್ಯಾದ 16, ಕಜಕಿಸ್ತಾನದ 6, ಕಿರ್ಗಿಸ್ತಾನದ 3 ಪ್ರಜೆಗಳು ಇದ್ದರು ಎಂಬುದು ಖಚಿತಪಟ್ಟಿದೆ.ಮೊಬೈಲ್‌ನಲ್ಲಿ ದೃಶ್ಯ ಸೆರೆ:
ವಿಮಾನ ಏರ್‌ಪೋರ್ಟ್ ಮೇಲೆ ಸುತ್ತಾಡಿದ ಬಳಿಕ ನಿಲ್ದಾಣದತ್ತ ಧಾವಿಸಿ ಬಂದು ರನ್‌ವೇ ಅಪ್ಪಳಿಸಿದ ಮತ್ತು ಈ ವೇಳೆ ದೊಡ್ಡಮಟ್ಟದಲ್ಲಿ ಬೆಂಕಿ ಅಲೆಗಳು ಎದ್ದ ದೃಶ್ಯಗಳು ಸ್ಥಳದಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಜೊತೆಗೆ ಪತನಗೊಂಡ ಬಳಿಕ ಕೆಲ ಪ್ರಯಾಣಿಕರು, ಉಳಿದವರನ್ನು ಅವಶೇಷಗಳಿಂದ ಹೊರಗೆ ಎಳೆಯುತ್ತಿರುವ ದೃಶ್ಯಗಳು ಕೂಡಾ ಮೊಬೈಲ್‌ನಲ್ಲಿ ಸೆರೆಯಾಗಿದೆ.ಆಕ್ಸಿಜನ್ ಟ್ಯಾಂಕ್ ಸ್ಫೋಟ ಬಗ್ಗೆಯೂ ಇದೆ ಅನುಮಾನ: ಘಟನೆಗೆ ಹಕ್ಕಿ ಡಿಕ್ಕಿ ಕಾರಣ ಎಂದು ಪೈಲಟ್, ನಿಯಂತ್ರಣಾ ಕೊಠಡಿಗೆ ಮಾಹಿತಿ ರವಾನಿಸಿದ್ದ. ಆದರೆ ಪೈಲಟ್ ಕ್ಯಾಬಿನ್ ಮತ್ತು ಇಡೀ ವಿಮಾನಕ್ಕೆ ಆಮ್ಲಜನಕ ಪೂರೈಸುವ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡಿರುವ ಅನುಮಾನವೂ ಇದೆ. ಹೀಗೆ ಟ್ಯಾಂಕ್ ಸ್ಫೋಟಗೊಂಡ ಕಾರಣ, ವಿಮಾನದೊಳಗೆ ಒತ್ತಡ ಭಾರೀ ಕುಸಿದಿರುವ ಸಾಧ್ಯತೆ ಇದೆ. ಅಪಘಾತಕ್ಕೂ ಮುನ್ನ ವಿಮಾನದೊಳಗಿನ ಕೆಲ ಪ್ರಯಾಣಿಕರು ಪ್ರಜ್ಞೆ ಕಳೆದುಕೊಂಡ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿರುವ ಕಾರಣ ಇಂಥ ಅನುಮಾನ ಇದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.