ಸಾರಾಂಶ
ಬೆಂಗಳೂರು : ರಾಜ್ಯದಲ್ಲಿನ ಹಿಂದುಳಿದ ವರ್ಗ, ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟವು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನೈತಿಕ ಬೆಂಬಲ ಘೋಷಣೆ ಮಾಡಿದೆ.
ಕೃತಕವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರದ ಮತ್ತು ರಾಜಭವನದ ಷಡ್ಯಂತ್ರಗಳನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಸ್ವಾಮೀಜಿಗಳು, ಈ ಷಡ್ಯಂತ್ರದ ವಿರುದ್ಧ ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೇಲ್ನೋಟಕ್ಕೆ ಇದು ರಾಜಕೀಯ ಸಂಘರ್ಷ ಎನಿಸಿದರೂ ಆಂತರ್ಯದಲ್ಲಿ ಹಿಂದುಳಿದ ಜಾರಿಗೆ ಸೇರಿದ ನಾಯಕನೊಬ್ಬನ ಏಳಿಗೆ ಸಹಿಸದ ಪಟ್ಟಭದ್ರರು ಕುತಂತ್ರದಿಂದ ಹೆಣೆದ ಷಡ್ಯಂತ್ರ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ. ಬಹಳಷ್ಟು ಮಂದಿ ಸ್ವಾಮೀಜಿಗಳು ಇದನ್ನು ಅರಿತು ನನ್ನ ಬೆಂಬಲಕ್ಕೆ ನಿಂತು ಇಡೀ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದ್ದಾರೆ.
ಭಾನುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮೀಜಿ ನೇತೃತ್ವದಲ್ಲಿ ಭೇಟಿ ನೀಡಿದ್ದ ಸ್ವಾಮೀಜಿಗಳು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ, ಮದುರೆ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಿವಮೊಗ್ಗದ ನಾರಾಯಣ ಗುರುಪೀಠದ ರೇಣುಕಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ವಿಜಯನಗರ ಸರೂರಿನ ಶಾಂತಮ್ಮಯ್ಯ ಸ್ವಾಮೀಜಿ ಅವರೂ ಸಹ ನಿಯೋಗದಲ್ಲಿ ಇದ್ದರು.
ಬಹುಸಂಖ್ಯಾತರ ಧ್ವನಿ ಅಡಗಿಸಲು ಯತ್ನ:
ಸಿಎಂಸಮ ಸಮಾಜದ ಸ್ಥಾಪನೆಗೆ ದೀನ ದಲಿತ, ಬಡ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ನಾನು ಪಟ್ಟಭದ್ರ ಹಿತಾಸಕ್ತಿಗಳಿಗೆ ಕಳೆದ 40 ವರ್ಷಗಳಿಂದ ಬಹು ದೊಡ್ಡ ಸವಾಲಾಗಿದ್ದೇನೆ. ನನ್ನನ್ನು ಮೂಲೆಗೆ ಸರಿಸುವ ಮೂಲಕ ಸಮಾಜದ ಬಹುಸಂಖ್ಯಾತ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬುದ್ಧ, ಬಸವ, ಬಾಬಾ ಸಾಹೇಬ್, ಕನಕದಾಸರು ಹಾಗೂ ನಾರಾಯಣಗುರುಗಳ ಆಶಯದಂತೆ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಬಹಳಷ್ಟು ಮಂದಿ ಸ್ವಾಮೀಜಿಗಳು ನನ್ನ ಬೆಂಬಲಕ್ಕೆ ನಿಂತು ಇಡೀ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸತ್ಯ ನನ್ನ ಜತೆ ಇದೆ, ಸತ್ಯದ ಜತೆ ನಾನಿದ್ದೇನೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.