ಸಾರಾಂಶ
ಬೆಂಗಳೂರು : ಬೆಂಗಳೂರು ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮ್ಯೂಸಿಯಂ ಹಾಗೂ ದೇಶದಲ್ಲೇ ಅತಿ ಎತ್ತರವಾದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜತೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಆಂಧ್ರಪ್ರದೇಶದ ಮಾದರಿಯಲ್ಲಿ ಬೆಂಗಳೂರಿನಲ್ಲಿ ಅಂಬೇಡ್ಕರ್ ಮ್ಯೂಸಿಯಂ ಮಾಡಲಾಗುವುದು. ಅಲ್ಲೇ ದೇಶದಲ್ಲೇ ಅತಿ ದೊಡ್ಡದಾದ ಅಂಬೇಡ್ಕರ್ ಪ್ರತಿಮೆ ಮಾಡಲಾಗುವುದು. ಅಂಬೇಡ್ಕರ್ ಅವರಿಗೆ ನಾವು ಎಷ್ಟು ಮಾಡಿದರೂ ಕಡಿಮೆಯೇ. ಅವರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವನ್ನು ನಮ್ಮ ಸರ್ಕಾರ ನಿರಂತರವಾಗಿ ಮಾಡುತ್ತದೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ವಿಜಯವಾಡದಲ್ಲಿ ದೇಶ ಹಾಗೂ ವಿಶ್ವದ ಅತಿದೊಡ್ಡ ಅಂಬೇಡ್ಕರ್ ಪ್ರತಿಮೆ ಇದೆ. ಆ ಪ್ರತಿಮೆ 206 ಅಡಿ ಎತ್ತರವಿದೆ. ಈ ಪೈಕಿ ಪ್ರತಿಮೆ 125 ಅಡಿ ಎತ್ತರವಿದ್ದರೆ, ಅದರ ಸ್ತಂಭ 85 ಅಡಿ ಎತ್ತರ ಹೊಂದಿದೆ.