ಸಾರಾಂಶ
ವಕ್ಪ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ನ್ಯಾ। ಬಿಆರ್. ಗವಾಯಿ ನೇತೃತ್ವದಲ್ಲಿ ಮೇ 15ಕ್ಕೆ ನಡೆಸುವುದಾಗಿ ಸುಪ್ರೀಂ ಹೇಳಿದೆ.
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ತನ್ನೆದುರು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಿಯೋಜಿತ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿಆರ್. ಗವಾಯಿ ನೇತೃತ್ವದಲ್ಲಿ ಮೇ 15ಕ್ಕೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮೇ 13 ರಂದು ಸಿಜೆಐ ಸಂಜೀವ್ ಖನ್ನಾ ನಿವೃತ್ತರಾಗಲಿದ್ದು, ಆ ಬಳಿಕ ನ್ಯಾ। ಗವಾಯಿ ಅವರ ಸಿಜೆಐ ಆಗಿ ನೇಮಕಗೊಳ್ಳಲಿದ್ದಾರೆ. ಹಾಗಾಗಿ ನ್ಯಾ। ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.
ವಿಚಾರಣೆ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಜೆಐ ಸಂಜೀವ್ ಖನ್ನಾ ‘ ಕೇಂದ್ರ ವ್ಯವಹರಿಸಿದ ಕೆಲವು ಅಂಶಗಳಿವೆ. ಆದರೆ ಅವುಗಳಿಗೆ ಸ್ಪಷ್ಟೀಕರಣದ ಅಗತ್ಯವಿದೆ. ಮಧ್ಯಂತರ ಹಂತದಲ್ಲಿ ಯಾವುದೇ ತೀರ್ಪು ಅಥವಾ ಆದೇಶವನ್ನು ಕಾಯ್ದಿರಿಸಲು ನಾನು ಬಯಸುವುದಿಲ್ಲ. ಈ ವಿಷಯವನ್ನು ಶೀಘ್ರ ವಿಚಾರಣೆ ಮಾಡಬೇಕಾಗುತ್ತದೆ, ಆದರೆ ಇದು ನನ್ನ ಮುಂದೆ ಬರುವುದಿಲ್ಲ’ ಎಂದರು.
ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟು ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ನೀಡಿತ್ತು.