ಗೋಮಾಂಸ ಸೇವಿಸಿದ್ದಾನೆಂದು ಆರೋಪಿಸಿ ಪಶ್ಚಿಮ ಬಂಗಾಳದ ವಲಸಿಗನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ

| Published : Sep 01 2024, 01:47 AM IST / Updated: Sep 01 2024, 04:56 AM IST

ಸಾರಾಂಶ

ಹರ್ಯಾಣದಲ್ಲಿ ಗೋಮಾಂಸ ಸೇವಿಸಿದ ಆರೋಪದ ಮೇಲೆ ವಲಸಿಗನೊಬ್ಬನನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಗುಂಪು ಹಲ್ಲೆ ನಡೆಸಿ ವ್ಯಕ್ತಿಯನ್ನು ಕೊಂದಿದೆ ಎಂದು ಆರೋಪಿಸಲಾಗಿದೆ.

ಚಂಡೀಗಢ: ಗೋಮಾಂಸ ಸೇವಿಸಿದ್ದಾನೆಂದು ಆರೋಪಿಸಿ ಪಶ್ಚಿಮ ಬಂಗಾಳದ ವಲಸಿಗನ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿದ ಘಟನೆ ಹರ್ಯಾಣದ ಛಕ್ರಿ ದಾದ್ರಿ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಸಬೀರ್‌ (26) ಮಲಿಕ್‌ ಎಂದು ಗುರುತಿಸಲಾಗಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.

 ವರದಿಯ ಪ್ರಕಾರ ಆ.27ರಂದು ಗುಜರಿ ಮಾರುವ ನೆಪದಲ್ಲಿ ಮಲಿಕ್‌ನನ್ನು ಸ್ಥಳೀಯ ಬಸ್‌ ನಿಲ್ದಾಣಕ್ಕೆ ಕರೆಸಿಕೊಂಡು ರಾಡ್‌ ಬಳಸಿ ಹಲ್ಲೆ ಮಾಡಲಾಗಿದೆ. ಈ ವೇಳೆ ನೆರೆದಿದ್ದ ಜನ ಮಧ್ಯಪ್ರವೇಶಿಸಲು ಯತ್ನಿಸಿದ ಕಾರಣ ಮಲಿಕ್‌ನನ್ನು ಬೇರೆಡೆ ಕರೆದೊಯ್ದ ಆರೋಪಿಗಳು, ಆತನನ್ನು ತೀವ್ರವಾಗಿ ಥಳಿಸಿ ಕೊಂದಿದ್ದಾರೆ.

ಬಂಧಿತ ಆರೋಪಿಗಳ ಹೆಸರು ಅಭಿಷೇಕ್‌ ಮೋಹಿತ್‌, ರವಿಂದರ್‌, ಕಮಲ್‌ಜಿತ್ ಮತ್ತು ಸಾಹಿಲ್. ಇವರು ಮಲಿಕ್‌ ಹಾಗೂ ಅಸ್ಸಾಂನ ಇನ್ನೊಬ್ಬ ವಲಸಿಗ ಗೋಮಾಂಸ ಸೇವಿಸಿರುವುದಾಗಿ ಆರೋಪಿಸಿದ್ದರು. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

==

ಗೋಮಾಂಸ ಒಯ್ಯುತ್ತಿದ್ದ ಶಂಕೆ: ವೃದ್ಧನ ಮೇಲೆ ರೈಲಿನಲ್ಲಿ ಹಲ್ಲೆ

ಮುಂಬೈ: ಗೋಮಾಂಸ ಕೊಂಡೊಯ್ಯುತ್ತಿರುವ ಶಂಕೆಯ ಮೇರೆಗೆ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರ ಮೇಲೆ ಸಹಪ್ರಯಾಣಿಕರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಇಗತ್‌ಪುರಿಯಲ್ಲಿ ನಡೆದಿದೆ.‘ಸಂತ್ರಸ್ತ ಹಾಜಿ ಅಶ್ರಫ್‌ ಮುನ್ಯರ್‌ ಮೇಲೆ ಕಲ್ಯಾಣ್‌ನಲ್ಲಿರುವ ತಮ್ಮ ಮಗಳ ಮನೆಗೆ ಪ್ರಯಾಣಿಸುತ್ತಿದ್ದ ವೇಳೆ ಹಲ್ಲೆ ನಡೆಸಲಾಗಿದೆ. ಘಟನೆಯ ವಿಡಿಯೋ ಆಧಾರದಲ್ಲಿ ಸಂತ್ರಸ್ತನನ್ನು ಗುರುತಿಸಿದ್ದು, ಕೆಲ ಆರೋಪಿಗಳನ್ನೂ ಗುರುತಿಸಲಾಗಿದೆ. ತನಿಖೆ ಮುಂದುವರೆಯುವುದು’ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಕೆಲ ಜನರು ವೃದ್ಧರ ಮೇಲೆ ದಾಳಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ.

ಸೆ.8ರಿಂದ 10ರವವರೆಗೆ ರಾಹುಲ್‌ ಅಮೆರಿಕ ಪ್ರವಾಸ

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೆ.8ರಿಂದ 10ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿವಿಧ ವಿವಿಗಳಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.ಶನಿವಾರ ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್‌ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ‘ಸೆ.8ರಂದು ಅಮೆರಿಕದ ಡಲ್ಲಾಸ್‌ಗೆ ಕಿರು ಭೇಟಿ ನೀಡಲಿರುವ ರಾಹುಲ್, ಸೆ.9 ಮತ್ತು 10ರಂದು ವಾಷಿಂಗ್ಟನ್‌ ಡಿಸಿಗೆ ತೆರಳಲಿದ್ದಾರೆ’ ಎಂದರು

‘ಡಲ್ಲಾಸ್‌ನಲ್ಲಿ ಟೆಕ್ಸಾಸ್ ವಿವಿ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ನಂತರ ಸಮುದಾಯದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಕೆಲ ತಂತ್ರಜ್ಞರನ್ನೂ ಭೇಟಿಯಾಗಿ, ರಾತ್ರಿ ಡಲ್ಲಾಸ್‌ನ ನಾಯಕರೊಂದಿಗೆ ಭೋಜನ ಸವಿಯಲಿದ್ದಾರೆ. ಮರುದಿನ ವಾಷಿಂಗ್ಟನ್‌ ಡಿಸಿಯಲ್ಲಿ ಚಿಂತಕರ ಚಾವಡಿ, ರಾಷ್ಟ್ರೀಯ ಪತ್ರಿಕಾ ಭವನದ ಪ್ರಮುಖರು ಸೇರಿದಂತೆ ಅನೇಕರೊಂದಿಗೆ ಮಾತುಕತೆ ನಡೆಸಲಿದ್ದಾರೆ’ ಎಂದರು.

ಲಾವೋಸ್‌ನಲ್ಲಿ 47 ಭಾರತೀಯ ‘ಸೈಬರ್‌ ಗುಲಾಮರ’ ರಕ್ಷಣೆ

ನವದೆಹಲಿ: ಲಾವೋಸ್‌ ದೇಶದಲ್ಲಿ ಒತ್ತೆಯಾಳಾಗಿ ಸಿಲುಕಿಕೊಂಡು ಭಾರತೀಯರಿಗೆ ಬಲವಂತವಾಗಿ ಆನ್‌ಲೈನ್‌ನಲ್ಲಿ ವಂಚನೆ ಎಸಗುವ ಕೆಲಸಕ್ಕೆ ಬಳಕೆಯಾಗುತ್ತಿದ್ದ 47 ಭಾರತೀಯರನ್ನು ಆ ದೇಶದ ತನಿಖಾ ಸಂಸ್ಥೆಗಳು ರಕ್ಷಿಸಿವೆ.

ಇವರಲ್ಲಿ 29 ಮಂದಿಯನ್ನು ಲಾವೋಸ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ ಇರಿಸಿ ರಕ್ಷಣೆ ನೀಡಲಾಗಿದೆ. ಇನ್ನೂ 18 ಮಂದಿ ದೂತಾವಾಸದ ಸಹಾಯ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲಾವೋಸ್ ಮತ್ತು ಕಾಂಬೋಡಿಯಾಕ್ಕೆ ಕೆಲಸ ಹುಡುಕಿಕೊಂಡು ಹೋಗುವ ಭಾರತೀಯರಿಗೆ ಕೆಲಸ ನೀಡುವ ನೆಪದಲ್ಲಿ ಆನ್‌ಲೈನ್‌ ವಂಚನೆ ಮಾಫಿಯಾದವರು ಸೆಳೆದು, ಪಾಸ್‌ಪೋರ್ಟ್‌ ಒತ್ತೆ ಇರಿಸಿಕೊಂಡು, ಬಲವಂತವಾಗಿ ಆನ್‌ಲೈನ್‌ ವಂಚನೆಯ ದಂಧೆಗೆ ತೊಡಗಿಸುವ ಪ್ರಕರಣಗಳು ಕೆಲ ಸಮಯದಿಂದ ನಡೆಯುತ್ತಿದೆ. ಈವರೆಗೆ ಇಂತಹ 635 ಭಾರತೀಯರನ್ನು ರಕ್ಷಿಸಲಾಗಿದೆ.

ಈಗ ಪುನಃ ಬೋಕಿಯೋದಲ್ಲಿರುವ ಗೋಲ್ಡನ್‌ ಟ್ರಯಾಂಗಲ್‌ ಸ್ಪೆಷಲ್‌ ಎಕನಾಮಿಕ್‌ ಜೋನ್‌ನಲ್ಲಿ ಸಿಲುಕಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ. ಇವರು ಡೇಟಿಂಗ್‌ ಆ್ಯಪ್‌ಗಳಲ್ಲಿ ಮಹಿಳೆಯರಂತೆ ನಕಲಿ ಪ್ರೊಫೈಲ್‌ ಸೃಷ್ಟಿಸಿ, ಭಾರತದಲ್ಲಿರುವ ಪುರುಷರನ್ನು ಆಕರ್ಷಿಸಿ, ಅವರಿಂದ ಹಣ ಸುಲಿಗೆ ಮಾಡುವ ಕೆಲಸಕ್ಕೆ ಬಳಕೆಯಾಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇವರು ಸೈಬರ್‌ ಗುಲಾಮರು: ಕೆಲಸ ಹುಡುಕಿಕೊಂಡು ಭಾರತದಿಂದ ಲಾವೋಸ್‌ಗೆ ತೆರಳುವ ಅಮಾಯಕರಿಗೆ ಕೆಲಸದ ಆಮಿಷ ತೋರಿಸಿ ದಂಧೆಕೋರರು ತಮ್ಮತ್ತ ಸೆಳೆಯುತ್ತಾರೆ. ನಂತರ ನಕಲಿ ಉದ್ಯೋಗದ ನೇಮಕಾತಿ ಪತ್ರ ನೀಡಿ, ಪಾಸ್‌ಪೋರ್ಟ್‌ ವಶಪಡಿಸಿ ಇಟ್ಟುಕೊಳ್ಳುತ್ತಾರೆ. ಬಳಿಕ ಸೈಬರ್‌ ಗುಲಾಮರನ್ನಾಗಿ ಮಾಡಿಕೊಂಡು, ನಿತ್ಯ ಇಂತಿಷ್ಟು ಎಂದು ಗುರಿ ನೀಡಿ, ಭಾರತೀಯರಿಗೆ ಇಂಟರ್ನೆಟ್‌ನಲ್ಲಿ ವಂಚಿಸುವ ಕೆಲಸಕ್ಕೆ ನಿಯೋಜಿಸುತ್ತಾರೆ.ಡೇಟಿಂಗ್‌ ಆ್ಯಪ್‌ನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಯುವುದು, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆಯ ಹೆಸರಿನಲ್ಲಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ವಂಚನೆ ಎಸಗಲಾಗುತ್ತದೆ. ವಂಚನೆಯ ಗುರಿ ತಲುಪಲು ವಿಫಲರಾದರೆ ಕೆಲವೊಮ್ಮೆ ಊಟ, ವಿಶ್ರಾಂತಿಯನ್ನೂ ನೀಡದೆ ಶೋಷಣೆ ಮಾಡಲಾಗುತ್ತದೆ ಎಂದು ತಪ್ಪಿಸಿಕೊಂಡು ಬಂದವರು ತಿಳಿಸಿದ್ದಾರೆ.

ಬ್ರೆಜಿಲ್‌ನಲ್ಲಿ ‘ಎಕ್ಸ್’ಗೆ ನಿರ್ಬಂಧ

ಸಾವೋ ಪಾಲೋ: ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ‘ ಎಕ್ಸ್‌ ’ನ್ನು (ಟ್ವೀಟರ್‌) ಬ್ರೆಜಿಲ್‌ನಲ್ಲಿ ನಿರ್ಬಂಧಿಸಲಾಗಿದೆ. ಸ್ಥಳೀಯ ಕಾನೂನು ಪಾಲನೆ ಮಾಡದ ಹಿನ್ನಲೆಯಲ್ಲಿ ಅಲ್ಲಿನ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿದೆ.

‘ಎಕ್ಸ್‌ನಲ್ಲಿ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ’ ಎಂಬ ಪ್ರಕರಣದಲ್ಲಿ ಬ್ರೆಜಿಲ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮತ್ತು ಎಕ್ಸ್ ಕಂಪನಿ ನಡುವೆ ಕೆಲ ದಿನಗಳಿಂದ ಘರ್ಷಣೆ ನಡೆಯುತ್ತಿತ್ತು. ಅದರ ಮುಂದುವರೆದ ಭಾಗ ಎನ್ನುವಂತೆ ಸುಪ್ರೀಂ ನ್ಯಾ। ಅಲೆಕ್ಸಾಂಡರ್ ಡಿ ಮೊರೆಸ್‌ ಅವರು ಕಂಪನಿ ಪರ ವಾದ ಮಂಡಿಸಲು ಸ್ಥಳೀಯ ಕಾನೂನು ಪ್ರತಿನಿಧಿ ನೇಮಕಕ್ಕೆ ಎಕ್ಸ್‌ಗೆ ಸೂಚಿಸಿದ್ದರು. ಆದರೆ ಸುಪ್ರೀಂ ಆದೇಶ ಪಾಲನೆಗೆ ಎಕ್ಸ್ ವಿಫಲವಾಗಿದ್ದು, ಬ್ರೆಜಿಲ್ ಕಾನೂನಿಗೆ ಅಗೌರವ ತೋರಿದೆ ಎನ್ನುವ ಕಾರಣಕ್ಕೆ ಎಕ್ಸ್ ಕಂಪನಿಗೆ ನಿರ್ಬಂಧ ಹೇರಲಾಗಿದೆ.ಕಂಪನಿ ತನ್ನ ಆದೇಶ ಪಾಲನೆ ಮಾಡುವವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಅಲ್ಲಿಯವರೆಗೂ ಅನ್ಯ ವಿಧಾನದಲ್ಲಿ ‘ಎಕ್ಸ್’ ಬಳಸಲು ಯಾರಾದರೂ ಯತ್ನಿಸಿದರೆ ನಿತ್ಯ 8900 ಡಾಲರ್ ದಂಡ ವಿಧಿಸಬೇಕು ಎಂದು ಕೋರ್ಟ್‌ ಸೂಚಿಸಿದೆ,

ಮಸ್ಕ್‌ ಕಿಡಿ: ಇದಕ್ಕೆ ಮಸ್ಕ್ ಪ್ರತಿಕ್ರಿಯಿಸಿದ್ದು, ‘ಅಲೆಕ್ಸಾಂಡರ್‌ ನ್ಯಾಯಧೀಶರಂತೆ ವೇಷ ಧರಿಸಿರುವ ಅತ್ಯಂತ ಕೆಟ್ಟ ರೀತಿಯ ಅಪರಾಧಿ’ ಎಂದಿದ್ದಾರೆ.