ಹರ್ಯಾಣದ ಶಂಭು ಗಡಿಯಲ್ಲಿ ರೈತ ಪ್ರತಿಭಟನೆಗೆ 200 ದಿನ : ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಬೆಂಬಲ

| Published : Sep 01 2024, 01:45 AM IST / Updated: Sep 01 2024, 05:00 AM IST

ಸಾರಾಂಶ

ಹರ್ಯಾಣದ ಶಂಭು ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಶನಿವಾರ 200 ದಿನ ತುಂಬಿದ್ದು, ಈ ಸಂದರ್ಭದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.

ಶಂಭು ಗಡಿ (ಹರ್ಯಾಣ): ಹರ್ಯಾಣದ ಶಂಭು ಗಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಶನಿವಾರ 200 ದಿನ ತುಂಬಿದೆ. 200 ದಿನದಿಂದ ಗಡಿಯನ್ನು ಬಂದ್‌ ಮಾಡಿ ಹೆದ್ದಾರಿಗಳಲ್ಲಿ ಟ್ರಾಕ್ಟರ್ ನಿಲ್ಲಿಸಿ ರೈತರು ಹೋರಾಡುತ್ತಿದ್ದಾರೆ.

200ನೇ ದಿನದ ಸಂದರ್ಭದಲ್ಲಿ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಶಂಭು ಗಡಿಗೆ ಆಗಮಿಸಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು ಹಾಗೂ ರೈತರಿಗೆ ನೀಡಿದ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಿನೇಶ್‌, ‘ರೈತರೆಲ್ಲ ನಮ್ಮ ಕುಟುಂಬ. ಅವರು ಇಲ್ಲಿ ಕುಳಿತು 200 ದಿನಗಳು ಕಳೆದಿವೆ, ಇದನ್ನು ನೋಡುವುದು ನೋವುಂಟುಮಾಡುತ್ತದೆ, ಅವರೆಲ್ಲರೂ ಈ ದೇಶದ ಪ್ರಜೆಗಳು, ರೈತರು ದೇಶವನ್ನು ನಡೆಸುತ್ತಾರೆ, ಅವರಿಲ್ಲದೆ ಏನೂ ಸಾಧ್ಯವಿಲ್ಲ ಆದರೆ ದೊಡ್ಡ ಕ್ರೀಡಾಪಟು ಆಗಿಯೂ ನಾನು ಅವರಿಗೆ ಏನೂ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕಳಾಗಿದ್ದೇನೆ’ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಅವರು, ‘ಅವರು (ಕೇಂದ್ರ ಸರ್ಕಾರ) ಕಳೆದ ಬಾರಿ ತಮ್ಮ ತಪ್ಪನ್ನು ಒಪ್ಪಿಕೊಂಡರು ಹಾಗೂ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆದರೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ರಿಪೇರಿಗೆ ಒಯ್ಯುತ್ತಿದ್ದ ಹೆಲಿಕಾಪ್ಟರ್‌ ಕೇದಾರನಾಥದಲ್ಲಿ ಪತನ

ಪಿಟಿಐ ರುದ್ರಪ್ರಯಾಗಉತ್ತರಾಖಂಡದ ಪ್ರಸಿದ್ಧ ತೀರ್ಥಕ್ಷೇತ್ರವಾದ ಕೇದಾರನಾಥದಲ್ಲಿ ಕೆಟ್ಟು ನಿಂತಿದ್ದ ಹೆಲಿಕಾಪ್ಟರ್‌ ಒಂದನ್ನು ರಿಪೇರಿಗೆಂದು ಸೇನಾಪಡೆಯ ಇನ್ನೊಂದು ಹೆಲಿಕಾಪ್ಟರ್‌ ಕೊಂಡೊಯ್ಯುತ್ತಿದ್ದಾಗ ತಾಂತ್ರಿಕ ಸಮಸ್ಯೆ ಉಂಟಾಗಿ ರಿಪೇರಿಯಾಗಬೇಕಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ.

ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಸಾವುನೋವು ಸಂಭವಿಸಿಲ್ಲ.ಕ್ರಿಸ್ಟಲ್‌ ಏವಿಯೇಷನ್‌ ಪ್ರೈ.ಲಿ.ಗೆ ಸೇರಿದ ಈ ಹೆಲಿಕಾಪ್ಟರ್‌ ಮೇ 24ರಂದು ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿ ಅಲ್ಲೇ ನಿಂತಿತ್ತು. ಅದನ್ನು ಶನಿವಾರ ಬೆಳಿಗ್ಗೆ ಸೇನಾಪಡೆಯ ಎಂಐ-17 ಹೆಲಿಕಾಪ್ಟರ್‌ ವಾಯುಮಾರ್ಗದಲ್ಲಿ ಗೌಚಾರ್‌ಗೆ ಹಾರಿಸಿಕೊಂಡು ಹೋಗುತ್ತಿತ್ತು. ಆಗ ತಾಂತ್ರಿಕ ಸಮಸ್ಯೆ ಉಂಟಾಗಿ ಎಂಐ ಹೆಲಿಕಾಪ್ಟರ್‌ನ ಚಾಲಕನೇ ಜನರಿಲ್ಲದ ಸ್ಥಳ ನೋಡಿ ಕೇದಾರನಾಥ ಪರ್ವತದಲ್ಲಿ ಅದನ್ನು ಕೆಳಗೆ ಬೀಳಿಸಿದ್ದಾನೆ ಎಂದು ವಾಯುಪಡೆ ಹೇಳಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ.

ಸುನಿತಾರನ್ನು 8 ತಿಂಗಳು ಅಂತರಿಕ್ಷದಲ್ಲೇ ಇರಿಸಲು ಕಲ್ಪನಾ ಚಾವ್ಲಾ ಘಟನೆ ಕಾರಣ!

ನವದೆಹಲಿ: ಭಾರತೀಯ ಮೂಲದ ಬಾಹ್ಯಾಕಾಶ ವಿಜ್ಞಾನಿ ಸುನಿತಾ ವಿಲಿಯಮ್ಸ್‌ರನ್ನು ಎಂಟು ತಿಂಗಳ ಕಾಲ ಅಂತರಿಕ್ಷದಲ್ಲೇ ಇರಿಸುವ ಕಠಿಣ ನಿರ್ಧಾರವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೈಗೊಂಡಿರುವುದಕ್ಕೆ 20 ವರ್ಷಗಳ ಹಿಂದೆ ಸಂಭವಿಸಿದ ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ ಅವರ ದುರಂತ ಸಾವು ಕಾರಣ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಜೂ.6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ಕ್ಕೆ ತೆರಳಿದ್ದ ನಾಸಾದ ಸ್ಟಾರ್‌ಲೈನರ್‌ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ, ಸೆ.6ರಂದು ಅದರಲ್ಲಿ ಭೂಮಿಗೆ ಮರಳಬೇಕಿದ್ದ ಸುನಿತಾ ವಿಲಿಯಮ್ಸ್‌ ಮತ್ತು ಇನ್ನೊಬ್ಬ ವಿಜ್ಞಾನಿಯನ್ನು 2025ರ ಫೆಬ್ರವರಿಯವರೆಗೆ ಐಎಸ್‌ಎಸ್‌ನಲ್ಲೇ ಇರಿಸಿ, ಸ್ಪೇಸ್ ಎಕ್ಸ್‌ ನೌಕೆಯಲ್ಲಿ ಕರೆದುಕೊಂಡು ಬರುವ ನಿರ್ಧಾರವನ್ನು ಇತ್ತೀಚೆಗಷ್ಟೇ ನಾಸಾ ಕೈಗೊಂಡಿತ್ತು. ಪೂರ್ವಮಾಹಿತಿಯಿಲ್ಲದೆ ಸುನಿತಾರನ್ನು 8 ತಿಂಗಳಷ್ಟು ಸುದೀರ್ಘ ಕಾಲ ಅಂತರಿಕ್ಷದಲ್ಲಿ ಇರಿಸುವ ಕಠಿಣ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.ಈ ಬಗ್ಗೆ ಸ್ಪಷ್ಟನೆ ನೀಡಿರುವ ನಾಸಾ ಮುಖ್ಯಸ್ಥ ಬಿಲ್‌ ನೆಲ್ಸನ್‌, 2003ರಲ್ಲಿ ಕಲ್ಪನಾ ಚಾವ್ಲಾ ಹಾಗೂ 6 ವಿಜ್ಞಾನಿಗಳನ್ನು ಬಲಿ ಪಡೆದ ಕೋಲಂಬಿಯಾ ನೌಕೆಯ ಸ್ಫೋಟ ಪ್ರಕರಣ ಮತ್ತು 1986ರಲ್ಲಿ 14 ಬಾಹ್ಯಾಕಾಶ ಯಾತ್ರಿಕರನ್ನು ಬಲಿ ಪಡೆದ ಚಾಲೆಂಜರ್‌ ನೌಕೆಯ ದುರಂತದ ಹಿನ್ನೆಲೆಯಲ್ಲಿ ದೋಷಪೂರಿತ ಸ್ಟಾರ್‌ಲಿಂಕ್‌ ನೌಕೆಯಲ್ಲಿ ಸುನಿತಾ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಕರೆದುಕೊಂಡು ಬಾರದೆ ಇರುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

ಹರ್ಯಾಣದಲ್ಲಿ ಓದಿ ಬಾಹ್ಯಾಕಾಶ ವಿಜ್ಞಾನಿಯಾಗಿ ನಾಸಾವನ್ನು ಸೇರಿದ್ದ ಕಲ್ಪನಾ ಚಾವ್ಲಾ, 2003ರಲ್ಲಿ ಕೊಲಂಬಿಯಾ ಗಗನೌಕೆಯಲ್ಲಿ ಅಂತರಿಕ್ಷಕ್ಕೆ ತೆರಳಿ, ಅಲ್ಲಿಂದ ವಾಪಸಾಗುವಾಗ ನೌಕೆಯು ಅಂತರಿಕ್ಷದಲ್ಲೇ ಸ್ಫೋಟಗೊಂಡು ದುರಂತ ಸಾವನ್ನಪ್ಪಿದ್ದರು.

ಹರ್ಯಾಣ ಚುನಾವಣಾ ದಿನಾಂಕ ಬದಲು: ಅ.1ರ ಬದಲು ಅ.5ಕ್ಕೆನವದೆಹಲಿ: ಬಿಜೆಪಿ ಹಾಗೂ ಇತರ ಕೆಲವು ಪಕ್ಷಗಳು ಮಾಡಿರುವ ಮನವಿಯ ಮೇರೆಗೆ ಹರ್ಯಾಣ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಬದಲಿಸಿದ್ದು. ಅ.1ರ ಬದಲು ಅ.5ರಂದು ನಡೆಸಲು ತೀರ್ಮಾನಿಸಿದೆ. ಹೀಗಾಗಿ ಅ.4ರಂದು ನಡೆಸಬೇಕಿದ್ದ ಮತ ಎಣಿಕೆಯನ್ನು ಅ.8ಕ್ಕೆ ಬದಲಿಸಿದೆ.ಹರ್ಯಾಣ ಮತಎಣಿಕೆ ದಿನಾಂಕ ಬದಲಾದ ಕಾರಣ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮತ ಎಣಿಕೆಯನ್ನೂ ಅ.4ರ ಬದಲು ಅ.8ರಂದು ನಡೆಸಲು ತೀರ್ಮಾನಿಸಲಾಗಿದೆ.

ಬದಲಾವಣೆಗೆ ಕಾರಣ ಏನು?: ಅ.1ರ (ಮಂಗಳವಾರ) ಆಸುಪಾಸು ಸಾಲುಸಾಲು ರಜೆಗಳು ಬರುವ ಕಾರಣ ಜನರು ರಜೆಗೆಂದು ಅನ್ಯ ಸ್ಥಳಕ್ಕೆ ತೆರಳುತ್ತಾರೆ. ಹೀಗಾಗಿ ಮತದಾನ ಪ್ರಮಾಣ ಕಡಿಮೆ ಆಗುತ್ತದೆ. ಆದ್ದರಿಂದ ಮತದಾನ ದಿನಾಂಕ ಬದಲಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.

ಅ,1ಕ್ಕೂ ಮುನ್ನ ಶನಿವಾರ ಹಾಗೂ ಭಾನುವಾರ ವಾರಾಂತ್ಯದ ರಜಾದಿನ ಇರುತ್ತದೆ. ಸೋಮವಾರ ಒಂದೇ ಕೆಲಸದ ದಿನ. ಇನ್ನು ಬುಧವಾರ ಗಾಂಧಿ ಜಯಂತಿ ಹಾಗೂ ಮಹಾಲಯ ಅಮಾವಾಸ್ಯೆ ಮತ್ತು ಗುರುವಾರ ಅಗ್ರಸೇನ ಜಯಂತಿ ಇವೆ. ಇವೆಲ್ಲ ರಜಾದಿನಗಳು. ಹೀಗಾಗಿ ಸೋಮವಾರ 1 ದಿನ ಕೆಲಸಕ್ಕೆ ರಜೆ ಹಾಕಿದರೆ ಸತತ 5 ದಿನ ರಜೆ ಸಿಗುತ್ತದೆ. ಈ ಸಂದರ್ಭ ಬಳಸಿಕೊಂಡು ಜನರು ರಜಾದಿನ ಕಳೆಯಲು ಪ್ರವಾಸಿ ಸ್ಥಳಗಳಿಗೆ ಹೋಗುವ ಸಾಧ್ಯತೆ ಇರುತ್ತದೆ. ಇದು ಮತದಾನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮತದಾನ ದಿನಾಂಕ ಬದಲಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.