ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂ ನಿರ್ದೇಶಕ ರಂಜಿತ್‌ ಅನುಚಿತ ವರ್ತನೆ: ನಟಿ ಶ್ರೀಲೇಖಾ

| Published : Aug 25 2024, 01:58 AM IST / Updated: Aug 25 2024, 04:32 AM IST

ranjith

ಸಾರಾಂಶ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂನ ಖ್ಯಾತ ನಿರ್ದೇಶಕ ಹಾಗೂ ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ತಿರುವನಂತಪುರಂ/ಕೋಲ್ಕತಾ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲೆಯಾಳಂನ ಖ್ಯಾತ ನಿರ್ದೇಶಕ ಹಾಗೂ ಕೇರಳ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಪಡೆಯಲು ನಟಿಯರು ಲೈಂಗಿಕವಾಗಿ ಲಭ್ಯವಿರಬೇಕು ಎಂಬ ನ್ಯಾ। ಹೇಮಾ ಸಮಿತಿಯ ವರದಿ ಸಂಬಂಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸರ್ಕಾರಕ್ಕೆ ಇದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

‘ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ರಂಜಿತ್‌ ಜೊತೆ ಮುಂದಿನ ಚಿತ್ರದ ಕುರಿತು ಮಾತುಕತೆ ನಡೆಸಲು ಅವರ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಅದು ನನಗೆ ಇಷ್ಟವಾಗಲಿಲ್ಲ. ಆದ್ದರಿಂದಾಗಿ ನಾನು ಅವರ ಮುಂದಿನ ಯೋಜನೆಯ ಭಾಗವಾಗಲು ಬಯಸುವುದಿಲ್ಲ ಎಂದು ಹೇಳಿ ಕೋಲ್ಕತಾಗೆ ಮರಳಿದೆ ’ ಎಂದು ಮಿತ್ರಾ ಹೇಳಿದ್ದಾರೆ.

ಜೊತೆಗೆ, ಅನ್ಯ ನಟಿಯರೊಂದಿಗೂ ಅವರು ಅನುಚಿತವಾಗಿ ವರ್ತಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿರುವ ಮಿತ್ರಾ, ಆಗಿದ್ದರೂ ಕೂಡ ಅದರ ಕುರಿತು ಮಾತಾಡದಂತೆ ಆತನ ಬಲ ಹಾಗೂ ಪ್ರಭಾವ ಅವರನ್ನು ತಡೆದಿರಬಹುದು ಎಂದಿದ್ದಾರೆ.

ಆದರೆ ಮಿತ್ರಾರ ಆರೋಪವನ್ನು ತಳ್ಳಿಹಾಕಿರುವ ರಂಜಿತ್‌ ಅಸಲಿಗೆ ತಾನೇ ಸಂತ್ರಸ್ತ ಎಂದಿದ್ದಾರೆ.

ಈ ನಡುವೆ ‘ತಪ್ಪಿತಸ್ಥರನ್ನು ಸರ್ಕಾರ ರಕ್ಷಿಸದು. ಈ ಕುರಿತು ಅಧಿಕೃತವಾಗಿ ದೂರು ದಾಖಲಾಗಿ ಆರೋಪ ಸಾಬೀತಾದರೆ ಮಾತ್ರ ನಾವು ನಿರ್ದೇಶಕನ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ. ಮತ್ತೊಂದೆಡೆ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಪ್ರತಿಕ್ರಿಯಿಸಿದ್ದು ‘ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾದರೂ ಸಹ ಆಯೋಗ ತನಿಖೆ ನಡೆಸಲು ಸಿದ್ಧ. ರಂಜಿತ್‌ ತಪ್ಪು ಮಾಡಿದ್ದರೆ ಫಿಲಂ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು’ ಎಂದಿದ್ದಾರೆ. ಮಿತ್ರಾ ದೂರನ್ನು ದಾಖಲಿಸಲು ಇಚ್ಛಿಸಿದರೆ ಸರ್ಕಾರ ಆಕೆಯ ಬೆಂಬಲಕ್ಕೆ ನಿಂತು ಅಗತ್ಯ ವ್ಯವಸ್ಥೆ ಮಾಡುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ. ರಂಜಿತ್‌ನ ವಿರುದ್ಧ ತನಿಖೆ ನಡೆಯಬೇಕೆಂದು ಕಮ್ಯುನಿಸ್ಟ್‌ ಪಕ್ಷದ ನಾಯಕಿ ಅನ್ನಿ ರಾಜಾ, ನಿರ್ದೇಶಕ ಡಾ. ಬಿಜು ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.