ಬಹುನಿರೀಕ್ಷಿತ ಬೆಂಗಳೂರು ಮತ್ತು ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ ಕನ್ನಡ ರಾಜ್ಯೋತ್ಸವದ ದಿನವಾದ ನ.1ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.ಈ ರೈಲು ಆರಂಭವಾದ ಬಳಿಕ ಐಟಿ ರಾಜಧಾನಿ ಮತ್ತು ವಾಣಿಣ್ಯ ರಾಜಧಾನಿಗಳ ಜನರ ಬಹುದಿನ ಕನಸೊಂದು ನನಸಾದಂತೆ ಆಗಲಿದೆ.
ಮುಂಬೈ: ಬಹುನಿರೀಕ್ಷಿತ ಬೆಂಗಳೂರು ಮತ್ತು ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ ಸಂಚಾರ ಕನ್ನಡ ರಾಜ್ಯೋತ್ಸವದ ದಿನವಾದ ನ.1ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ರೈಲು ಆರಂಭವಾದ ಬಳಿಕ ಐಟಿ ರಾಜಧಾನಿ ಮತ್ತು ವಾಣಿಣ್ಯ ರಾಜಧಾನಿಗಳ ಜನರ ಬಹುದಿನ ಕನಸೊಂದು ನನಸಾದಂತೆ ಆಗಲಿದೆ.
ಸದ್ಯ ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆಗಳು ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ರೈಲು ಸಂಚಾರದ ಘೋಷಣೆ ಕೆಲ ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಾರ್ಗ:
ಬೆಂಗಳೂರು ಮತ್ತು ಮುಂಬೈ ನಡುವಿನ ಮಾರ್ಗ 1118 ಕಿ.ಮೀ ಉದ್ದವಿದ್ದು, ರೈಲು 16 ಗಂಟೆಯಲ್ಲಿ ಕ್ರಮಿಸುವ ನಿರೀಕ್ಷೆ ಇದೆ. ಈ ಲೆಕ್ಕಾಚಾರದಲ್ಲಿ ರೈಲು ಗಂಟೆಗೆ 70 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲಿದೆ. ಹಾಲಿ ಇರುವ ಉಭಯ ನಗರಗಳ ನಡುವಿನ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಇದೇ ಮಾರ್ಗ ಕ್ರಮಿಸಲು 22 ತಾಸು ತೆಗೆದುಕೊಳ್ಳುತ್ತಿದೆ.
ಎಲ್ಲಿ ಆರಂಭ:
ರೈಲು ಬೈಯ್ಯಪ್ಪನಹಳ್ಳಿಯ ಸರ್.ಎಂ. ವಿಶ್ವೇಶರಾಯ ನಿಲ್ದಾಣದಿಂದ ಪ್ರಯಾಣ ಆರಂಭಿಸಿ ಮುಂಬೈನ ಸಿಎಸ್‌ಎಂಟಿ ನಿಲ್ದಾಣದವರೆಗೆ ಪ್ರಯಾಣ ಬೆಳೆಸಲಿದೆ.
ಪ್ರಯಾಣ ಸಮಯ:
ಪ್ರತಿ ದಿನ ರಾತ್ರಿ 7.50ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮಾರನೇ ದಿನ ಬೆಳಗ್ಗೆ 11.55ಕ್ಕೆ ಮುಂಬೈ ತಲುಪಲಿದೆ. ಅದೇ ರೀತಿ ರಾತ್ರಿ 8.10ಕ್ಕೆ ಮುಂಬೈನಿಂದ ಹೊರಡಲಿರುವ ರೈಲು ಮಾರನೇ ದಿನ 11.55ಕ್ಕೆ ಬೆಂಗಳೂರು ತಲುಪಲಿದೆ.
ಎಲ್ಲೆಲ್ಲಿ ಸ್ಟಾಪ್:
ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ್‌ನಲ್ಲಿ ರೈಲು ನಿಲುಗಡೆ ಹೊಂದಿರಲಿದೆ ಎನ್ನಲಾಗಿದೆ.
16 ಬೋಗಿ:
ರೈಲು ಒಟ್ಟು 16 ಬೋಗಿ ಹೊಂದಿರಲಿದ್ದು, ಒಟ್ಟು 823 ಸೀಟುಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇನ್ನು ಟಿಕೆಟ್ ದರ 2700 ರು.ನಿಂದ 4250 ರು.ವರೆಗೆ ಇರುವ ನಿರೀಕ್ಷೆ ಇದೆ. ಅಂದರೆ ಒಂದು ಕಡೆಯ ಸಂಚಾರದ ವೇಳೆ ಪೂರ್ಣ ಸೀಟುಗಳು ಭರ್ತಿ ಆದರೆ ರೈಲ್ವೆಗೆ 24 ಲಕ್ಷ ರು. ಆದಾಯ ಬರಲಿದೆ.
