ಸಾರಾಂಶ
ಕೋವಿಡ್ ಲಸಿಕೆ ಬಿಡುಗಡೆ ಮಾಡಿದ್ದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಹೈದರಾಬಾದ್: ಕೋವಿಡ್ ಲಸಿಕೆ ಬಿಡುಗಡೆ ಮಾಡಿದ್ದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ‘ಹಿಲ್ಚೋಲ್’ ಹೆಸರಿನ ಓರಲ್ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.
ಇದು 2 ಡೋಸ್ ಲಸಿಕೆ ಆಗಿದ್ದು ಮೊದಲ ಡೋಸ್ ಹಾಕಿದ 14 ದಿನಕ್ಕೆ 2ನೇ ಡೋಸ್ ಲಸಿಕೆ ಹಾಕಲಾಗುತ್ತದೆ. 1 ವರ್ಷ ಮೇಲ್ಪಟ್ಟ ಮಕ್ಕಳು ಇದನ್ನು ಪಡೆಯಲು ಅರ್ಹರು.ಅಮೆರಿಕ ಪ್ರಾಯೋಜಿತ ಹಿಲ್ಲೆಮನ್ ಲ್ಯಾಬೊರೇಟರಿಯಿಂದ ಪರವಾನಗಿ ಪಡೆದು ಹಿಲ್ಚೋಲ್ (ಬಿಬಿವಿ131) ಅಭಿವೃದ್ಧಿಪಡಿಸಿರುವುದಾಗಿ ಭಾರತ್ ಬಯೋಟೆಕ್ ಹೇಳಿಕೊಂಡಿದ್ದು, ಈ ಲಸಿಕೆಯ ಸುರಕ್ಷತೆ, ಇಮ್ಯುನೊಜೆನೆಸಿಟಿ ಹಾಗೂ ಪರಿಣಾಮಕಾರಿತ್ವವನ್ನು ಧೃಡಪಡಿಸಲಾಗಿದೆ. ಭಾರತದ ಔಷಧ ನಿಯಂತ್ರಕರು ಇದಕ್ಕೆ ಅನುಮತಿ ನೀಡಿದ್ದು, ವಿಶ್ವದ ಇತರೆಡೆ ಕೂಡ ಅನುಮತಿ ಪಡೆಯಲಾಗುತ್ತದೆ ಎಂದು ಎಂದಿದೆ.
ಕಾಲರಾ ನಿಯಂತ್ರಣಕ್ಕೆ ಇದು ಅಗತ್ಯವಾಗಿದ್ದು, ಪ್ರತಿ ವರ್ಷ ವಿಶ್ವಾದ್ಯಂತ 100 ದಶಲಕ್ಷ ಡೋಸ್ ಲಸಿಕೆಗಳಿಗೆ ಬೇಡಿಕೆಯಿರುತ್ತದೆ. ಈಗ ಕೇವಲ ಒಂದೇ ತಯಾರಿಕಾ ಕಂಪನಿಯಾಗಿರುವ ಕಾರಣ ಲಸಿಕೆಯ ಕೊರತೆ ಎದುರಾಗಿದೆ. ಕೊರತೆಯನ್ನು ಭಾರತ್ ಬಯೋಟೆಕ್ ನೀಗಿಸುವ ಆಶಾವಾದವಿದೆ.200 ದಶಲಕ್ಷ ಡೋಸ್ ಹಿಲ್ಚೋಲ್ ತಯಾರಿಸುವ ಸಾಮರ್ಥ್ಯದ ಘಟಕಗಳನ್ನು ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ಸ್ಥಾಪಿಸಲಾಗಿದೆ.
2021 ರಿಂದ ಕಾಲರಾ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿವೆ. 2023 ರ ಆರಂಭದಿಂದ ಈ ವರ್ಷದ ಮಾರ್ಚ್‌ವರೆಗೆ, 31 ದೇಶಗಳಲ್ಲಿ 824,479 ಪ್ರಕರಣಗಳು ಮತ್ತು 5,900 ಸಾವುಗಳು ವರದಿಯಾಗಿವೆ.