ಸಾರಾಂಶ
ಮಣಿಪುರದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಪೂರ್ಣವಾಗಿದ್ದು, ನಂತರ ನಾಗಾಲ್ಯಾಂಡ್ ಪ್ರವೇಶ ಮಾಡಿದೆ. 2ನೇ ದಿನ ಪೂರೈಸಿದ ಕಾಂಗ್ರೆಸ್‌ನ ಹೈಬ್ರಿಡ್ ಯಾತ್ರೆ ಮುಂದೆ ಸಾಗುತ್ತಿದೆ.
ಸೇನಾಪತಿ (ಮಣಿಪುರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 67 ದಿನಗಳ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯು ಸೋಮವಾರ 2ನೇ ದಿನವನ್ನು ಪೂರೈಸಿತು.
ಮುಂಜಾನೆ ಮಣಿಪುರದ ಸೆಕ್ಮಾಯಿಯಿಂದ ಬಸ್ ಮೂಲಕ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಕಾಂಗ್ಪೋಕ್ಪಿ ದಾಟಿ ಸೇನಾಪತಿ ತಲುಪಿದ ಬಳಿಕ ಸ್ವಲ್ಪ ಕಾರ್ಯಕರ್ತರು ಮತ್ತು ಸ್ಥಳೀಯರೊಂದಿಗೆ ಕೆಲ ಕಾಲ ನಡೆದುಕೊಂಡು ಸಾಗಿದರು.
ಬಳಿಕ ಇಲ್ಲಿ ಸೇನಾಪತಿಯಲ್ಲಿ ತಮ್ಮ ಬಸ್ಸಿನ ಮೇಲಿನಿಂದ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ‘ನೀವು ದುರಂತವನ್ನು ಎದುರಿಸಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
ನೀವು ಕುಟುಂಬ ಸದಸ್ಯರನ್ನು, ಆಸ್ತಿಯನ್ನು ಕಳೆದುಕೊಂಡಿದ್ದೀರಿ. ಕಾಂಗ್ರೆಸ್ ಮಣಿಪುರದ ಜನರೊಂದಿಗೆ ನಿಂತಿದೆ. ರಾಜ್ಯವನ್ನು ಮತ್ತೆ ಶಾಂತಿಯುತ ಮತ್ತು ಸೌಹಾರ್ದಯುತವಾಗಿಸಲು ಬಯಸುತ್ತದೆ’ ಎಂದರು.
ಕೊನೆಯದಾಗಿ ರಾತ್ರಿ ನಾಗಾಲ್ಯಾಂಡ್ ತಲುಪಿದ ಬಳಿಕ 2ನೇ ದಿನದ ಯಾತ್ರೆ ಮುಕ್ತಾಯವಾಗಿದೆ. ಸೋಮವಾರ ಮಣಿಪುರದ ಇಂಫಾಲ್ ಸಮೀಪದ ಥೌಬಾಲ್‌ನಲ್ಲಿ ಯಾತ್ರೆ ಆರಂಭವಾಗಿತ್ತು.
ಲೋಕಸಭೆ ಚುನಾವಣೆ ಮುನ್ನ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಭಾರತ್ ಜೋಡೋ ಯಾತ್ರೆ ಬಳಿಕ ರಾಹುಲ್ ನೇತೃತ್ವದಲ್ಲಿ 66 ದಿನಗಳ ಕಾಲ ದೇಶದ ಪಶ್ಚಿಮದಿಂದ ಪೂರ್ವಕ್ಕೆ ನೂತನ ಯಾತ್ರೆ ಕೈಗೊಳ್ಳಲಾಗಿದೆ.