ಸಾರಾಂಶ
ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹2000 ಕೋಟಿ ಮೌಲ್ಯದ 500 ಕೆ.ಜಿ. ಕೋಕೇನ್ ವಶಪಡಿಸಿಕೊಂಡಿದ್ದು, ಇದು ದೇಶದಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಮಾದಕ ವಸ್ತುವಾಗಿದೆ.
ನವದೆಹಲಿ: ದೆಹಲಿ ಪೊಲೀಸರು ಬುಧವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2000 ಕೋಟಿ ರು. ಮೌಲ್ಯ ಹೊಂದಿರುವ 500 ಕೆ.ಜಿ. ಕೋಕೇನ್ ವಶಪಡಿಸಿಕೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಶಪಡಿಸಿಕೊಂಡು ಅತಿದೊಡ್ಡ ಪ್ರಮಾಣದ ಮಾದಕ ವಸ್ತುವಾಗಿದೆ.
ದೆಹಲಿಯಲ್ಲಿ ಸಕ್ರಿಯವಾಗಿರುವ ಮಾದಕವಸ್ತು ಜಾಲದಿಂದ ಇದು ರವಾನೆಯಾಗಿತ್ತು. ವಿದೇಶಗಳಿಂದ ಆಮದಾಗಿದ್ದ ಈ ಮಾದಕ ವಸ್ತುವನ್ನು ದೆಹಲಿ ಹಾಗೂ ದೇಶದ ಇತರ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿದಾಗ 15 ಕೆಜಿ ಕೊಕೇನ್ ಪತ್ತೆಯಾಗಿದೆ. ಆತ ಮುಂಬೈಗೆ ಕೊಕೇನ್ ಕೊಂಡೊಯ್ಯಲು ಆಗಮಿಸಿದ್ದ. ಆತ ನೀಡಿದ ಸುಳಿವಿನ ಮೇರೆಗೆ ಉಳಿದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಜಾರ್ಖಂಡ್‌ನಲ್ಲಿ ಹಿಂದೂ, ಆದಿವಾಸಿ ಜನಸಂಖ್ಯೆ ಇಳಿಕೆ: ಮೋದಿ
ಹಜಾರಿಬಾಗ್(ಜಾರ್ಖಂಡ್): ರಾಜ್ಯದಲ್ಲಿ ಹಿಂದೂಗಳು ಮತ್ತು ಆದಿವಾಸಿಗಳ ಜನಸಂಖ್ಯೆ ಕುಸಿತವಾಗುತ್ತಿದ್ದು, ಇದಕ್ಕೆ ಆಡಳಿತಾರೂಢ ಜೆಎಂಎಂ ಮತ್ತು ಅದರ ಮಿತ್ರಪಕ್ಷಗಳ ವೋಕ್ ಬ್ಯಾಂಕ್ ರಾಜಕಾರಣವೇ ಕಾರಣ ಎಂದು ಪ್ರಧಾನಿ ಮೋದಿ ಬುಧವಾರ ಕಿಡಿ ಕಾರಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯ ಅಂಗವಾಗಿ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯ ಕೊನೆಯ ದಿನದಂದು ಮಾತನಾಡಿದ ಮೋದಿ, ‘ರಾಜ್ಯದ ಗುರುತು, ಸಂಸ್ಕೃತಿ ಮತ್ತು ಪರಂಪರೆಯನ್ನು ಪಣಕ್ಕಿಟ್ಟು ಜೆಎಂಎಂ ಒಳನುಸುಳುಕೋರರನ್ನು ಬೆಂಬಲಿಸಿ ಪೋಷಿಸುತ್ತಿದೆ. ಇಂತಹ ಶಕ್ತಿಗಳನ್ನು ಹೊರಗೋಡಿಸಿ. ಇದು ಭ್ರಷ್ಟಾಚಾರವನ್ನು ನಿಗ್ರಹಿಸಿ, ಮಗಳು, ಭೂಮಿ, ಆಹಾರವನ್ನು ಕಾಪಾಡಿಕೊಳ್ಳುವ ಪರಿವರ್ತನೆಯ ಸಮಯ’ ಎಂದು ಹೇಳಿದ್ದಾರೆ.ರಾಜ್ಯದ 24 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗುವ ಪರಿವರ್ತನಾ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೆ.20ರಂದು ಚಾಲನೆ ನೀಡಿದ್ದರು.